ಮುಂಬೈ, ಡಿ.03 (DaijiworldNews/MB) : ಜಾತಿ ಸೂಚಕ ಹೆಸರುಗಳನ್ನು ಹೊಂದಿರುವ ಎಲ್ಲಾ ಪ್ರದೇಶಗಳಿಗೆ ಮರುನಾಮಕರಣ ಮಾಡಲು ಮಹಾರಾಷ್ಟ್ರ ಸಂಪುಟ ತೀರ್ಮಾನಿಸಿದ್ದು ಈ ಪ್ರಸ್ತಾಪವನ್ನು ಬುಧವಾರ ಸಂಪುಟ ಅಂಗೀಕಾರ ಮಾಡಿದೆ.
ಈ ಬಗ್ಗೆ ಮಾತನಾಡಿರುವ ಸಚಿವ ಅಸ್ಲಾಮ್ ಶೇಖ್, ಬ್ರಿಟಿಷರ ಆಡಳಿತದ ಸಂದರ್ಭ ಪ್ರದೇಶಗಳಿಗೆ ಜಾತಿ ಸೂಚಕ ಹೆಸರುಗಳನ್ನು ಇಡಲಾಗಿತ್ತು. ಅದು ಜನರ ನಡುವೆ ಕಂದಕ ಸೃಷ್ಟಿಸಿ ಆಡಳಿತ ನಡೆಸುವ ಕುತಂತ್ರ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಈ ಎಲ್ಲಾ ಜಾತಿ ಸೂಚಕ ಹೆಸರು ಇರುವ ಪ್ರದೇಶಕ್ಕೆ ಮರು ನಾಮಕರಣ ಮಾಡಲಿದೆ ಎಂದು ತಿಳಿಸಿದ್ದಾರೆ.
ಹಾಗೆಯೇ ಈ ಪ್ರದೇಶಗಳಿಗೆ ಸಾಮಾಜಿಕ ಸೇವೆಗೈದು ದೇಶಕ್ಕಾಗಿ ದುಡಿದವರ ಹೆಸರನ್ನು ನಾಮಕರಣ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಪತ್ರಿಕಾ ಪ್ರಕಟನೆ ಹೊರಡಿಸಿರುವ ಮಹಾರಾಷ್ಟ್ರ ಸರ್ಕಾರ, ಮಹರ್-ವಾಡಾ, ಬೌದ್ಧ-ವಾಡಾ, ಮಾಂಗ್-ವಾಡಾ, ಧೋರ್-ವಸ್ತಿ, ಬ್ರಹ್ಮನ್-ವಾಡಾ, ಮಾಲಿ-ಗಲ್ಲಿಯಂತಹ ಹೆಸರುಗಳು ಸಹಜವಾದರೂ ಕೂಡಾ ನಮ್ಮಂತಹ ಪ್ರಗತಿಪರ ರಾಜ್ಯದಲ್ಲಿ ಈ ಹೆಸರುಗಳು ಇರುವುದು ಸರಿಯಲ್ಲ. ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರೀಯ ಐಕ್ಯತೆ ಕಾಪಾಡುವ ನಿಟ್ಟಿನಲ್ಲಿ ಈ ಪ್ರದೇಶಗಳಿಗೆ ಮರುನಾಮಕರಣ ಮಾಡಲಾಗುವುದು. ಈ ಪ್ರದೇಶಗಳಿಗೆ ಸಮತಾ ನಗರ, ಭೀಮ ನಗರ, ಜ್ಯೋತಿನಗರ, ಶಾಹು ನಗರ, ಕ್ರಾಂತಿ ನಗರ ಎಂಬಂತಹ ಹೆಸರುಗಳನ್ನು ಇಡಲಾಗುವುದು ಎಂದು ತಿಳಿಸಿದೆ.