ಬೆಂಗಳೂರು, ಡಿ.02 (DaijiworldNews/PY): "ರಾಜ್ಯದಲ್ಲಿ ಕೊವಾಕ್ಸಿನ್ ಲಸಿಕೆ ಯಶಸ್ವಿಯಾಗುವ ವಿಶ್ವಾಸವಿದೆ. ಅಲ್ಲದೇ, ಲಸಿಕೆ ವಿತರಣೆಗೆ ಎಲ್ಲಾ ರೀತಿಯಾದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ" ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ವೈದೇಹಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಭಾರತ್ ಬಯೋಟೆಕ್ ಸಹಯೋಗದಲ್ಲಿ ಕೊವಾಕ್ಸಿನ್ ಕೊರೊನಾ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಬುಧವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸುಧಾಕರ್, "ರಾಜ್ಯಗಳ 25 ಭಾಗಗಳಲ್ಲಿ ಪ್ರಯೋಗ ನಡೆಯುತ್ತಿದೆ. ಲಸಿಕೆಯನ್ನು ಸುಮಾರು 26 ಸಾವಿರ ಮಂದಿಗೆ ನೀಡಲಾಗುತ್ತದೆ ರಾಜ್ಯದಲ್ಲಿ ಸುಮಾರು 1,600-1,800 ಮಂದಿಗೆ ಲಸಿಕೆಯನ್ನು ಪ್ರಾಯೋಗಿಕವಾಗಿ ನೀಡಲು ತೀರ್ಮಾನ ಮಾಡಲಾಗಿದೆ. ಲಸಿಕೆ ನೀಡುವ ಸಂದರ್ಭ ಕೇಳಿಬರುವ ಊಹಾಪೋಹಗಳಿಗೆ ಯಾರೂ ಕಿವಿಕೊಡಬೇಡಿ" ಎಂದು ತಿಳಿಸಿದರು.
"ಜಗತ್ತಿನಲ್ಲಿ ಶೇ. 15 ರಿಂದ ಶೇ 20ರಷ್ಟು ಭಾರತೀಯ ಕಂಪೆನಿಗಳೆ ಲಸಿಕೆ ನೀಡುವ ಮಟ್ಟಿಗೆ ಬೆಳೆದಿದ್ದು, ಲಸಿಕೆಯಿಂದ ಕೆಲವು ಅಡ್ಡಪರಿಣಾಮವೂ ಕೂಡಾ ಬರಬಹುದಾಗಿದೆ. ಈ ಬಗ್ಗೆ ತಜ್ಞರು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಹಾಗಾಗಿ ಈ ಬಗ್ಗೆ ಯಾವುದೇ ಭಯವಿಲ್ಲ" ಎಂದರು.
"ರಾಜ್ಯದಲ್ಲಿ ಸುಮಾರು 29,451 ಲಸಿಕೆ ವಿತರಣೆ ಕೇಂದ್ರ ಹಾಗೂ 10,008 ಸಿಬ್ಬಂದಿಗಳನ್ನು ಗುರುತಿಸಲಾಗಿದೆ.ಕೊರೊನಾ ನಿಯಂತ್ರಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಮೊದಲ ಲಸಿಕೆ ನೀಡಲಾಗುತ್ತದೆ. ಬಳಿಕ 50 ವರ್ಷ ದಾಟದವರಿಗೆ ಲಸಿಕೆ ನೀಡಲಾಗುವುದು" ಎಂದು ಹೇಳಿದರು.