ರಾಯಚೂರು, ಡಿ.02 (DaijiworldNews/PY): "ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಭೂಹಗರಣದ ಸಂಪೂರ್ಣ ಮಾಹಿತಿಯನ್ನು ಒಂದು ತಿಂಗಳಿನಲ್ಲಿ ಬಿಚ್ಚಿಡುತ್ತೇನೆ" ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಅವರು ಹೇಳಿದರು.
ರಾಯಚೂರಿನಲ್ಲಿ ಮಾತನಾಡಿದ ಅವರು, "ರಾಮನಗರದ ಕೇತಗಾನಹಳ್ಳಿ ಪರಿಶಿಷ್ಟಜಾತಿಗೆ ಸೇರಿದ 200 ಎಕರೆ, 65 ಎಕರೆ ಗೋಮಾಳ ಕಬಳಿಕೆ ವಿಚಾರವಾಗಿ ಶೀಘ್ರವಾಗಿ ಹಗರಣವನ್ನು ತಾತ್ವಿಕ ಹಂತಕ್ಕೆ ಕೊಂಡೊಯ್ಯುತ್ತೇನೆ. ಈ ಬಗ್ಗೆ ಪ್ರಕರಣ ಲೋಕಾಯುಕ್ತ ಮೆಟ್ಟಿಲೇರಿದ್ದರೂ, ಹೈಕೋರ್ಟ್ ಸೂಚನೆ ನೀಡಿದ್ದರೂ ಕೂಡಾ ಸರ್ಕಾರ ಯಾವುದೇ ರೀತಿಯಾದ ಕ್ರಮ ಕೈಗೊಂಡಿಲ್ಲ" ಎಂದು ತಿಳಿಸಿದರು.
ಕಾಫಿ ಡೇ ಹಗರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಈ ಬಗ್ಗೆ ಸಿಬಿಐ ನಿವೃತ್ತ ಡಿಜಿಐ ಅಶೋಕ್ ಮಲ್ಹೋತ್ರ ಅವರು ವರದಿ ನೀಡಿದ್ದಾರೆ. ಆದರೆ, ಅವರು ನೀಡಿರುವ ವರದಿಯಲ್ಲಿ ಅನೇಕ ಭ್ರಷ್ಟರ ಹಾಗೂ ಭ್ರಷ್ಟತನದ ಉಲ್ಲೇಖವಿಲ್ಲ. ಮಾಳವಿಕ ಹೆಗಡೆ, ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ಮಂದಿ ಹಣ ಲೂಟಿ ಮಾಡಿದ್ದಾರೆ. ಹಗರಣದ ವಿಚಾರವಾಗಿ ಗಂಭೀರವಾದ ತನಿಖೆಯಾಗಿಲ್ಲ" ಎಂದರು.
"ಕ್ರಿಮಿನಲ್ಸ್ಗಳನ್ನು ಬೆಳೆಸಿದ್ದಕ್ಕೆ ಮಾಜಿ ಸಿಎಂ ಎಸ್. ಎಂ.ಕೃಷ್ಣ ಅವರು ರಾಜ್ಯದ ಜನರೊಂದಿಗೆ ಕ್ಷಮೆ ಕೇಳಬೇಕು. ತಮ್ಮ ಅಪರಾಧಗಳನ್ನು ಮುಚ್ಚಿಹಾಕಲು ಕೃಷ್ಣಾ ಬಿಜೆಪಿಗೆ ಸೇರಿದ್ದಾರಾ ಎಂದು ಹೇಳಬೇಕು. ಏನೆಲ್ಲಾ ಭ್ರಷ್ಟಾಚಾರ ನಡೆದಿದೆ ಎಂದು ಸ್ವತಃ ಅವರೇ ಹೇಳಬೇಕು. ಎಸ್.ಎಂ. ಕೃಷ್ಣಾ ಅವರ ಅಳಿಯ ಸಿದ್ದಾರ್ಥ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರ ಬಗ್ಗೆ ಸಂಶಯವಿದೆ" ಎಂದು ಹೇಳಿದರು.
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಇದಕ್ಕೆ ನಮ್ಮ ಬೆಂಲವಿದೆ. ದುಡಿಯುವ ಜನರ ಪರವಾಗಿ ಸರ್ಕಾರ ಕೆಲಸ ಮಾಡಬೇಕು ಹೊರತು ಶ್ರೀಮಂತರ ಪರವಾಗಿ ಕಾನೂನು ಮಾಡಬಾರದು. ಮೂರು ಜನವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕು" ಎಂದು ಒತ್ತಾಯಿಸಿದರು.