ನವದೆಹಲಿ, ಡಿ.02 (DaijiworldNews/MB) : ಸುಪ್ರೀಂ ಕೋರ್ಟ್ ಅನ್ನು ಟೀಕಿಸಿ ವ್ಯಂಗ್ಯಚಿತ್ರ ರಚಿಸಿದ ಕಾರ್ಟೂನಿಸ್ಟ್ ರಚಿತಾ ತನೇಜಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಕ್ಕೆ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಸಮ್ಮತಿಸಿದ್ದಾರೆ.
ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿರುವ ಬಗ್ಗೆ ವ್ಯಂಗ್ಯಚಿತ್ರಗಳನ್ನು ರಚಿತಾ ತನೇಜಾ ತಮ್ಮ ಟ್ವಿಟ್ಟರ್ ಹ್ಯಾಂಡಲ್ ಸ್ಯಾನಿಟರಿ ಪ್ಯಾನೆಲ್ಸ್ನಲ್ಲಿ ಪೋಸ್ಟ್ ಮಾಡಿದ್ದರು.
ಈ ಬಗ್ಗೆ ಕಾನೂನು ವಿದ್ಯಾರ್ಥಿಯೊಬ್ಬರು ಸಲ್ಲಿಸಿದ ನ್ಯಾಯಾಂಗ ನಿಂದನೆ ದೂರಿಗೆ ಪ್ರತಿಕ್ರಿಯಿಸಿದ ಅಟಾರ್ನಿ ಜನರಲ್, ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ನೀಡಿದ್ದಾರೆ. ಹಾಗೆಯೇ ಈ ಟ್ವೀಟ್ಗಳು ದೇಶದ ಅತ್ಯುನ್ನತ ನ್ಯಾಯಾಲಯದ ನಿಂದನೆ ಮಾತ್ರವಲ್ಲದೆ ಸುಪ್ರೀಂ ಕೋರ್ಟ್ ಮೇಲಿನ ದಾಳಿ ಹಾಗೂ ಅವಮಾನ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ಸುಪ್ರೀಂ ಕೋರ್ಟ್ ಅನ್ನು ಟೀಕಿಸಿ ಟ್ವೀಟ್ ಮಾಡಿದ ಕಾಮಿಡಿಯನ್ ಕುನಾಲ್ ಕಾಮ್ರಾ ವಿರುದ್ದವೂ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಕ್ಕೆ ಅಟಾರ್ನಿ ಜನರಲ್ ಇತ್ತೀಚೆಗೆ ಒಪ್ಪಿಗೆ ನೀಡಿದ್ದರು.