ನವದೆಹಲಿ, ಡಿ.02 (DaijiworldNews/PY): "ಉತ್ತರಪ್ರದೇಶದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಅಪರಾಧಗಳನ್ನು ಮುಚ್ಚಿಹಾಕಲು ಬಿಜೆಪಿ ಸರ್ಕಾರ ಪ್ರಾರಂಭಿಸಿರುವ ಮಿಷನ್ ಶಕ್ತಿ ವಿಫಲವಾಗಿದೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಸರ್ಕಾರ ಗುರಿ ಕೇವಲ ಬೂಟಾಟಿಕೆ ಹಾಗೂ ಸುಳ್ಳು ಪ್ರಚಾರವಾಗಿದ್ದಾಗ ಮಾತ್ರ ಕಾರ್ಯಾಚರಣೆಗಳು ವಿಫಲವಾಗುತ್ತವೆ. ಉತ್ತರಪ್ರದೇಶದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಅಪರಾಧಗಳನ್ನು ಮುಚ್ಚಿಹಾಕಲು ಬಿಜೆಪಿ ಸರ್ಕಾರ ಪ್ರಾರಂಭಿಸಿರುವ ಮಿಷನ್ ಶಕ್ತಿ ವಿಫಲವಾಗಿದೆ. ಮಹಿಳೆಯೊಬ್ಬರ ಮೇಲೆ ಬೆಂಕಿ ಹಚ್ಚಿದ ಆರೋಪಿಗಳ ವಿರುದ್ಧದ ಘಟನೆಗೆ ಸಂಬಂಧಿಸಿದಂತೆ ಒಂದು ತಿಂಗಳ ಬಳಿಕ ಪ್ರಕರಣ ದಾಖಲಿಸಲಾಗುತ್ತಿದೆ. ಯುಪಿಯಲ್ಲಿ ಅಪರಾಧಗಳು ಹೆಚ್ಚುತ್ತಿವೆ" ಎಂದಿದ್ದಾರೆ.
ಮಹಿಳೆಯರ ಸುರಕ್ಷತೆ ಹಾಗೂ ಘನತೆ ಕಾಪಾಡುವ ಸಲುವಾಗಿ ಯೋಗಿ ಆದಿತ್ಯನಾಥ್ ಸರ್ಕಾರವು ಅಕ್ಟೋಬರ್ನಲ್ಲಿ ಮಿಷನ್ ಶಕ್ತಿ ಅಭಿಯಾನಕ್ಕೆ ಚಾಲನೆ ನೀಡಿದ್ದು, ಮಿಷನ್ ಶಕ್ತಿ ಅಭಿಯಾನದಡಿ ಮಹಿಳೆಯರ ವಿರುದ್ಧದ ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ನೀಡಲಾಗುವುದು ಎಂದು ಎಚ್ಚರಿಕೆ ನೀಡಿತ್ತು.
ಬದೋಹಿಯಲ್ಲಿ 21 ವರ್ಷದ ಯುವತಿಯನ್ನು ಮನೆಯೊಳಗೆ ಸುಟ್ಟುಹಾಕಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಒಂದು ತಿಂಗಳ ಬಳಿಕ ಪ್ರಕರಣ ದಾಖಲಾಗಿದೆ ಎಂದು ಹೇಳಿರುವ ಮಾಧ್ಯಮದ ವರದಿಯನ್ನು ಪ್ರಿಯಾಂಕ ಗಾಂಧಿ ಟ್ವಿಟ್ಟರ್ನಲ್ಲಿ ಉಲ್ಲೇಖಿಸಿದ್ದಾರೆ.