ಪುಣೆ, ಡಿ.02 (DaijiworldNews/MB) : ''ದೇವಾಲಯಗಳಲ್ಲಿ ಪೂಜಾರಿಗಳಿಗಿಲ್ಲದ ಸುಸಂಸ್ಕೃತ ಉಡುಗೆ ಕೇವಲ ಭಕ್ತರಿಗೆ ಮಾತ್ರವೇಕೆ'' ಎಂದು ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಪ್ರಶ್ನಿಸಿದ್ದಾರೆ.
ಶಿರಡಿ ಸಾಯಿಬಾಬಾ ದೇವಾಲಯ ಟ್ರಸ್ಟ್ ಶಿರಡಿ ದೇವಾಲಯದಲ್ಲಿ ಸುಸಂಸ್ಕೃತ ರೀತಿಯಲ್ಲಿ ವಸ್ತ್ರ ಧರಿಸಿ ಬರಬೇಕೆಂದು ಬೋರ್ಡ್ ಹಾಕಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅವರು ವಿಡಿಯೋ ಸಂದೇಶ ರವಾನಿಸಿದ್ದಾರೆ.
''ಶಿರಡಿ ದೇವಾಲಯದಲ್ಲಿ ಸುಸಂಸ್ಕೃತ ರೀತಿಯಲ್ಲಿ ಉಡುಗೆ ಧರಿಸಿ ಬರಬೇಕೆಂದು ಫಲಕಗಳನ್ನು ಹಾಕಲಾಗಿದ್ದು ಈ ಫಲಕವನ್ನು ತೆಗೆಯದಿದ್ದರೇ ನಾವೇ ಶಿರಡಿಗೆ ತೆರಳಿ ಫಲಕಗಳನ್ನು ತೆಗೆದು ಹಾಕುತ್ತೇವೆ'' ಎಂದು ಎಚ್ಚರಿಕೆ ನೀಡಿದ್ದಾರೆ.
''ಈ ಫಲಕವು ವ್ಯಕ್ತಿಗಳ ವೈಯಕ್ತಿಕ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದೆ. ದೇಶದಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಅವರ ನೆಚ್ಚಿನ ಬಟ್ಟೆ ಧರಿಸುವ ಸ್ವಾತಂತ್ಯ್ರವಿದೆ. ದೇವಾಲಯಗಳ ಅರ್ಚಕರು ಮತ್ತು ಪೂಜಾರಿಗಳು ಅರ್ಧ ಬಟ್ಟೆ ಹಾಕುತ್ತಾರೆ. ಅವರಿಗೆ ಇಲ್ಲದ ಸುಸಂಸ್ಕೃತ ಉಡುಗೆ ಭಕ್ತರಿಗೆ ಯಾಕೆ'' ಎಂದು ಪ್ರಶ್ನಿಸಿದ್ದಾರೆ.
ಇನ್ನು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ನ ಸಿಇಓ, ''ಈ ಫಲಕದ ಮೂಲಕ ಭಕ್ತರಲ್ಲಿ ಮನವಿ ಮಾಡಲಾಗಿದೆಯೇ ಹೊರತು ಇದು ಯಾವುದೇ ವಸ್ತ್ರ ಸಂಹಿತೆಯಲ್ಲ. ದೇವಾಲಯದಲ್ಲಿ ಯಾವುದೇ ವಸ್ತ್ರ ಸಂಹಿತೆಯನ್ನು ಜಾರಿಗೆ ತಂದಿಲ್ಲ'' ಎಂದು ಸ್ಪಷ್ಟನೆ ನೀಡಿದ್ದಾರೆ.