ಮೈಸೂರು, ಡಿ.02 (DaijiworldNews/PY): "ಕಾಂಗ್ರೆಸ್ನಿಂದ ನಾನು ಹಣ ಪಡೆದಿದ್ದೇನೆ ಎಂಬುದನ್ನು ಸಿದ್ದರಾಮಯ್ಯ ಸಾಬೀತುಪಡಿಸಲಿ" ಎಂದು ಶಾಸಕ ಜಿಟಿ ದೇವೇಗೌಡ ಸವಾಲೆಸೆದಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, "ಕಳೆದ 25 ವರ್ಷಗಳಿಂದ ನಾನು ಹೇಗೆ ಏನು ಎನ್ನುವ ವಿಚಾರ ಸಿದ್ದರಾಮಯ್ಯ ಅವರಿಗೆ ತಿಳಿದಿದೆ. ನಾನು ಹಣ ಪಡೆದಿದ್ದೇನೆ ಎಂಬುದನ್ನು ಅವರು ಸಾಬೀತು ಪಡಿಸಲಿ. ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ" ಎಂದು ಹೇಳಿದರು.
"ಸಿದ್ದರಾಮಯ್ಯ ಅವರೊಂದಿಗೆ ಲೋಕಸಭಾ ಚುನಾವಣೆಯ ಸಂದರ್ಭ ಒಂದೇ ಸಭಾಂಗಣದಲ್ಲಿ ಕುಳಿತುಕೊಂಡು ಸಭೆ ನಡೆಸಿದ್ದೆವು. ಈ ಸಂದರ್ಭ ಅವರು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಹೇಳಿದ್ದು, ನಾನು ಅದಕ್ಕೆ ಒಪ್ಪಿದ್ದೆ" ಎಂದರು.
"ಯತೀಂದ್ರ ಹಾಗೂ ರಾಜು ಅವರು ಬೂತ್ ಖರ್ಚು ವ್ಯವಸ್ಥೆಗಾಗಿ ಹಣ ವಿತರಿಸಿದ್ದರು. ನಾನು ಚುನಾವಣೆಯ ಸಂದರ್ಭ ಹಣಕಾಸಿನ ವ್ಯವಸ್ಥೆ ಮಾಡಿಲ್ಲ. ಅಲ್ಲದೇ ನಾನು ವೈಯುಕ್ತಿಕವಾಗಿ ಹಣವೂ ನೀಡಿಲ್ಲ, ನನಗೆ ಕೂಡಾ ಅವರು ಹಣ ಕೊಟ್ಟಿಲ್ಲ. ಈ ವಿಚಾರವನ್ನು ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಈ ಬಗ್ಗೆ ಸಿದ್ದರಾಮಯ್ಯ ಅವರು ಸೂಕ್ತವಾದ ವಿವರಣೆ ನೀಡಬೇಕು" ಎಂದು ಒತ್ತಾಯಿಸಿದರು.