ನವದೆಹಲಿ, ಡಿ.02 (DaijiworldNews/PY): "ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರೊಂದಿಗೆ ಮುನಿಸಿಕೊಂಡು ಬಂಡಾಯ ಎದ್ದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಟಿಎಂಸಿ ಹಿರಿಯ ಮುಖಂಡ ಸುವೇಂದು ಅಧಿಕಾರಿ ಅವರ ಎಲ್ಲಾ ಅಸಮಾಧಾನಗಳನ್ನು ನಿವಾರಿಸಲಾಗಿದೆ" ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ.
ಸುವೇಂದು ಅಧಿಕಾರಿ ಅವರು ಟಿಎಂಸಿ ಜೊತೆಗಿನ ಭಿನ್ನಾಭಿಪ್ರಾಯದ ಕಾರಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಟಿಎಂಸಿ ಹಿರಿಯ ಮುಖಂಡ, ಲೋಕಸಭಾ ಸಂಸದ ಸುಗತ ರಾಯ್, ಸಂಸದರಾದ ಸುದೀಪ್ ಬಂಡೋಪಾಧ್ಯಾಯ ಮತ್ತು ಅವಿಷೇಕ್ ಬ್ಯಾನರ್ಜಿ ಹಾಗೂ ಚುನಾವಣಾ ಕಾರ್ಯತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಸುವೇಂದು ಅವರೊಂದಿಗೆ ಮಾತುಕತೆ ನಡೆಸಿ ಅವರ ಅಸಮಾಧಾನಗಳನ್ನು ನಿವಾರಿಸಿದ್ದಾರೆ ಎಂದು ವರದಿ ತಿಳಿಸಿದೆ.
"ಪಕ್ಷದೊಂದಿಗಿನ ಎಲ್ಲಾ ಭಿನ್ನಾಭಿಪ್ರಾಯಗಳನ್ನು ನಿವಾರಿಸಲಾಗಿದೆ. ನಮ್ಮ ನಿರೀಕ್ಷೆಯಂತೆ ಸುವೇಂದು ಅಧಿಕಾರಿಯವರು ತಮ್ಮ ನಿಲುವಿನ ವಿಚಾರವಾಗಿ ಸ್ಪಷ್ಟನೆ ನೀಡಲಿದ್ದಾರೆ" ಎಂದಿದ್ದಾರೆ.
ಸುವೇಂದು ಅಧಿಕಾರಿಯವರು ಈ ವಿಚಾರದ ಬೆಳವಣಿಗೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ಸುವೇಂದು ಅವರ ತಂದೆಯ ಬಳಿ ಕೇಳಿದಾಗ, "ಈ ವಿಚಾರ ಒಂದು ವೇಳೆ ನಿಜವೇ ಆದಲ್ಲಿ ನನಗೆ ಖುಷಿ" ಎಂದು ಹೇಳಿದ್ದಾರೆ.