ನವದೆಹಲಿ, ಡಿ.02 (DaijiworldNews/PY): "ಭಾರತದ ಗಡಿಯೊಳಕ್ಕೆ ಉಗ್ರರು ನುಸುಳಲು ಬಳಸಿದ್ದ ಸುರಂಗದ ಮೂಲವನ್ನು ಪತ್ತೆ ಮಾಡಲು ಪಾಕಿಸ್ತಾನದ ಗಡಿಯೊಳಗೆ ಬಿಎಸ್ಎಫ್ ತಂಡವು ಪ್ರವೇಶ ಮಾಡಿತ್ತು" ಎಂದು ಉನ್ನತ ಅಧಿಕಾರಿಗಳು ಹೇಳಿದ್ದಾರೆ.
ನ.19ರಂದು ಜಮ್ಮು-ಕಾಶ್ಮೀರದ ನಾಗ್ರೋಟಾದಲ್ಲಿ ನಡೆದಿದ್ದ ಗುಂಡಿನ ಚಕಮಕಿಯಲ್ಲಿ ನಾಲ್ಕು ಜೈಷ್-ಎ-ಮೊಹಮ್ಮದ್ ಸಂಘಟನೆಯ ಭಯೋತ್ಪಾದಕರನ್ನು ಭದ್ರತಾಪಡೆಗಳನ್ನು ಗುಂಡಿಕ್ಕಿ ಹತ್ಯೆಗೈದಿದ್ದರು.
ಈ ಉಗ್ರರು ಸುರಂಗ ಮಾರ್ಗ ಮಾಡಿ ಗಡಿ ಪ್ರವೇಶ ಮಾಡಿದ್ದಾಗಿ ಹೇಳಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲು ಬಿಎಸ್ಎಫ್ ತಂಡವೊಂದನ್ನು ರಚಿಸಿತ್ತು.
"ಈ ಉಗ್ರರ ಕೈಯಿಂದ ವಶಪಡಿಸಿಕೊಳ್ಳಲಾಗಿದ್ದ ಮೊಬೈಲ್ ಸಾಧನದ ಆಧಾರದಲ್ಲಿ ಉಗ್ರರು ಗಡಿಯೊಳಕ್ಕೆ ಪ್ರವೇಶಿಸಲು ಬಳಕೆ ಮಾಡಿದ್ದ ಸುರಂಗವನ್ನು ಬಿಎಸ್ಎಫ್ ತಂಡ ಪತ್ತೆ ಹಚ್ಚಿದ್ದು, ಸುರಂಗವನ್ನು ಪತ್ತೆ ಮಾಡಲು ಬಿಎಸ್ಎಫ್ ತಂಡವು ಪಾಕಿಸ್ತಾದ ಭೂಪ್ರದೇಶದೊಳಗೆ ಸುಮಾರು 200 ಮೀ. ದೂರ ಕ್ರಮಿಸಿದ್ದರು. ಬಿಎಸ್ಎಫ್ ತಂಡವು ಒಳಭಾಗದ ವಿಡಿಯೋ ಚಿತ್ರೀಕರಣ ಮಾಡಿಕೊಂಡು ವಾಪಾಸ್ಸಾಗಿತ್ತು. ಈ ಕಾರ್ಯಾಚರಣೆ ತ್ವರಿತ ಹಾಗೂ ಗುಪ್ತಚರ ಆಧಾರಿತ ಕ್ರಮ" ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.
"ಪಾಕಿಸ್ತಾನದ ಭೂಪ್ರದೇಶದಲ್ಲಿ ಈ ಸುರಂಗವನ್ನು ಕೊರೆಯಲಾಗಿದ್ದು, ಈ ಸುರಂಗವು ಜಮ್ಮುವಿನ ಸಾಂಬಾ ಜಿಲ್ಲೆಯ ರೇಗಲ್ಗೆ ಸಂಪರ್ಕ ಕಲ್ಪಿಸಿದೆ. ಉಗ್ರರು ಈ ಸುರಂಗದ ಮೂಲಕ ಗಡಿ ಪ್ರವೇಶ ಮಾಡಿದ್ದು, ಸಾಂಬಾದ ಜತ್ವಾಲ್ ಗ್ರಾಮದಿಂದ ಟ್ರಕ್ವೊಂದರ ಮೂಲಕ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸಿದ್ದರು" ಎಂದು ಬಿಎಸ್ಎಫ್ ಪ್ರಕಟಣೆ ವಿವರಿಸಿದೆ.
"ಸುರಂಗ ಮಾರ್ಗವನ್ನು ನಮ್ಮ ತಂಡವು ನ.22ರಂದೇ ಪತ್ತೆ ಹಚ್ಚಿತ್ತು. ಅದರ ಪ್ರವೇಶ ದ್ವಾರವನ್ನು ಮಣ್ಣಿನಿಂದ ಮುಚ್ಚಲಾಗಿತ್ತು. ಅಲ್ಲದೇ, ಯಾರಿಗೂ ಕಾಣದಂತೆ ಸುರಂಗದ ದ್ವಾರವನ್ನು ಪೊದೆಗಳಿಂದ ಮುಚ್ಚಿದ್ದರು. ಸುರಂಗದ ದ್ವಾರವನ್ನು ಮರಳು ಚೀಲಗಳಿಂದ ಮುಚ್ಚಲಾಗಿದ್ದು, ಇದನ್ನು ಕರಾಚಿಯಿಂದ ತಂದಿರುವ ಗುರುತುಗಳು ಸಿಕ್ಕಿವೆ. ಪಾಕಿಸ್ತಾನದ ಛಾಕ್ ಭುರಾ, ರಜಬ್ ಸಾಹೀದ್ ಹಾಗೂ ಆಸೀಫ್ ಸಾಹೀದ್ ಪೋಸ್ಟ್ಗಳು ಈ ಸುರಂಗದ ಬಳಿ ಇವೆ" ಎಂದು ತಿಳಿಸಿವೆ.
"ಬಿಎಸ್ಎಫ್, ಜಮ್ಮು-ಕಾಶ್ಮೀರ ಪೊಲೀಸರು ಹಾಗೂ ಗುಪ್ತಚರ ಇಲಾಖೆ ಸಮನ್ವಯ ಕಾರ್ಯಾಚರಣೆಯಿಂದಾಗಿ ಈ ಸುರಂಗ ಪತ್ತೆಯಾಗಿದೆ" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.