ನವದೆಹಲಿ, ಡಿ.02 (DaijiworldNews/MB) : ಕೇಂದ್ರ ಸರ್ಕಾರದ ನೀತಿಗಳ ವಿರುದ್ದ ಸದಾ ವಾಗ್ದಾಳಿ ನಡೆಸುತ್ತಲಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ದೆಹಲಿಯಲ್ಲಿ ರೈತರು ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ಈಗಾಗಲೇ ಬೆಂಬಲ ಸೂಚಿಸಿದ್ದಾರೆ. ಹಾಗೆಯೇ ಪ್ರತಿಭಟನಾನಿರತ ರೈತರ ಮೇಲೆ ಪೊಲೀಸರು ನಡೆಸಿದ ಜಲಫಿರಂಗಿ ಹಾಗೂ ಅಶ್ರುವಾಯು ಪ್ರಯೋಗವನ್ನು ತೀವ್ರವಾಗಿ ಖಂಡಿಸಿದ್ದಾರೆ.''ಇದು ಸುಳ್ಳು ಹೇಳುವ, ಲೂಟಿ ಮಾಡುವ, ಸೂಟು ಬೂಟಿನ ಸರ್ಕಾರ'' ಎಂದು ಟೀಕಿಸಿದ್ದಾರೆ.
ಬುಧವಾರ ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಸರ್ಕಾರವು ರೈತನ ಆದಾಯ ದ್ವಿಗುಣವಾಗುತ್ತದೆ ಎಂದು ಹೇಳಿತು. ಆದರೆ ಮಾಡಿದ್ದು ತಮ್ಮ ಸ್ನೇಹಿತರ ಆದಾಯ ನಾಲ್ಕು ಪಟ್ಟು ಹಾಗೂ ರೈತರ ಆದಾಯ ಅರ್ಧದಷ್ಟು. ಇದು ಸುಳ್ಳು ಹೇಳುವ, ಲೂಟಿ ಮಾಡುವ, ಸೂಟು ಬೂಟಿನ ಸರ್ಕಾರ'' ಎಂದು ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. ಹಾಗೆಯೇ ದೆಹಲಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಪೊಲೀಸರು ನಡೆಸಿದ ಜಲಫಿರಂಗಿ ಹಾಗೂ ಅಶ್ರುವಾಯು ಪ್ರಯೋಗದ ವಿಡಿಯೋವನ್ನು ಕೂಡಾ ಉಲ್ಲೇಖಿಸಿದ್ದಾರೆ.
ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ಸತತ ಆರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು ರೈತರು ಹಾಗೂ ಸರ್ಕಾರದ ನಡುವೆ ನಡೆದ ಮೊದಲ ಮಾತುಕತೆ ವಿಫಲವಾಗಿದೆ. ಇನ್ನು ಸರ್ಕಾರ ಗುರುವಾರ ರೈತರನ್ನು ಮಾತುಕತೆಗೆ ಕರೆದಿದೆ.