ನವದೆಹಲಿ, ಡಿ.02 (DaijiworldNews/PY): "ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಪೈಕಿ ಅಧಿಕ ಮಂದಿ ರೈತರಂತೆ ಕಾಣುತ್ತಿಲ್ಲ" ಎಂದು ಕೇಂದ್ರ ಸಚಿವ ವಿ.ಕೆ.ಸಿಂಗ್ ಹೇಳಿದ್ದಾರೆ.
"ಚಿತ್ರದಲ್ಲಿ ಕಾಣಿಸುತ್ತಿರುವವರ ಪೈಕಿ ಹೆಚ್ಚಿನವರು ರೈತರಂತೆ ಕಾಣಿಸುತ್ತಿಲ್ಲ. ಇವರು ಕೃಷಿ ಕಾನೂನಿಗೆ ಆಕ್ಷೇಪಿಸುತ್ತಿರುವ ರೈತರಲ್ಲ ಬದಲಾಗಿ ಬೇರೆಯವರು. ಕೃಷಿ ಮಸೂದೆಯ ವಿರೋಧಕ್ಕಿಂತಲೂ ಇದರ ಹಿಂದೆ ಕಮಿಷನ್ ಪಡೆಯುವವರಿದ್ದಾರೆ" ಎಂದು ವಿ.ಕೆ.ಸಿಂಗ್ ಅವರು ಹೇಳಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ವಿಜ್ಞಾನ ಭವನದಲ್ಲಿ ನಡೆದ ಮಾತುಕತೆಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೆ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್, ವಾಣಿಜ್ಯ ಖಾತೆಯ ರಾಜ್ಯ ಸಚಿವ ಸೋಮ್ ಪ್ರಕಾಶ್ ಭಾಗವಹಿಸಿದ್ದು ಮೂರು ಗಂಟೆಗಳ ಕಾಲ ಮಾತುಕತೆ ನಡೆದಿದ್ದು, ಮಾತುಕತೆ ವಿಫಲವಾಗಿದೆ. ರೈತರು ಈ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂಬ ಆಗ್ರಹವನ್ನು ಸರ್ಕಾರದ ಮುಂದಿಟ್ಟಿದ್ದು ಸರ್ಕಾರ ಒಪ್ಪಿಲ್ಲ ಎಂದು ವರದಿ ಹೇಳಿದೆ.
ಭಾರತೀಯ ಕಿಸಾನ್ ಯೂನಿಯನ್’ನ ಅಧ್ಯಕ್ಷ ಬಲ್ಬೀರ್ ಸಿಂಗ್ ರಾಜೆವಾಲ್ ಮಾತನಾಡಿ, "ಮೂರೂ ಕಾಯ್ದೆಗಳನ್ನು ಕೂಡಾ ರದ್ದುಪಡಿಸಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ" ಎಂದು ತಿಳಿಸಿದ್ದಾರೆ.
ವಿ.ಕೆ.ಸಿಂಗ್ ಅವರ ಈ ಹೇಳಿಕೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿದೆ.