ನವದೆಹಲಿ, ಡಿ.02 (DaijiworldNews/MB) : ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಬಳಿ ಕೇಂದ್ರದ ಮೂವರು ಸಚಿವರು ಮಂಗಳವಾರ ನಡೆಸಿದ ಮಾತುಕತೆ ವಿಫಲವಾಗಿದೆ. ರೈತರು ಈ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂಬ ಆಗ್ರಹವನ್ನು ಸರ್ಕಾರದ ಮುಂದಿಟ್ಟಿದ್ದು ಸರ್ಕಾರ ಒಪ್ಪಿಲ್ಲ ಎಂದು ವರದಿ ತಿಳಿಸಿದೆ.
ವಿಜ್ಞಾನ ಭವನದಲ್ಲಿ ನಡೆದ ಮಾತುಕತೆಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೆ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್, ವಾಣಿಜ್ಯ ಖಾತೆಯ ರಾಜ್ಯ ಸಚಿವ ಸೋಮ್ ಪ್ರಕಾಶ್ ಭಾಗವಹಿಸಿದ್ದು ಮೂರು ಗಂಟೆಗಳ ಕಾಲ ಮಾತುಕತೆ ನಡೆದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ರೈತ ಸಂಘಟನೆಗಳ ಮುಖಂಡರು, ಮೊದಲ ಮಾತುಕತೆ ವಿಫಲವಾದ ಕಾರಣ ಗುರುವಾರ ಮತ್ತೊಂದು ಮಾತುಕತೆಗೆ ಸರ್ಕಾರ ಆಹ್ವಾನ ನೀಡಿದೆ ಎಂದು ತಿಳಿಸಿದ್ದಾರೆ.
ಇನ್ನು ಸರ್ಕಾರವು ರೈತರು ಬೊಟ್ಟುಮಾಡಿರುವ ಸಮಸ್ಯೆಗಳ ಪರಿಶೀಲನೆಗೆ ಸಮಿತಿಯೊಂದನ್ನು ರಚಿಸುವ ಪ್ರಸ್ತಾಪ ಮಾಡಿದ್ದು ಈ ಪ್ರಸ್ತಾಪವನ್ನು ಭಾಗವಹಿಸಿದ್ದ 35 ರೈತ ಸಂಘಟನೆಗಳ ಪ್ರತಿನಿಧಿಗಳು ತಿರಸ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ರೈತರು ಕೇಂದ್ರದ ಈ ಕಾಯ್ದೆಯನ್ನು ರದ್ದು ಮಾಡಬೇಕು ಎಂಬ ತಮ್ಮ ನಿಲುವನ್ನು ಬದಲಾಯಿಸಿಲ್ಲ. ಅತ್ತ ಸರ್ಕಾರವೂ ನಿರಂತರವಾಗಿ ಈ ಕಾಯ್ದೆಯನ್ನು ಸಮರ್ಥಿಸುತ್ತಲ್ಲೇ ಇದೆ. ಈ ಕಾಯ್ದೆಯಿಂದಾಗಿ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ರದ್ದಾಗಲಿದ್ದು ರೈತರು ವ್ಯಾಪಾರಿಗಳ ನಿಯಂತ್ರಣಕ್ಕೆ ಒಳಪಡಬೇಕಾಗುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರೆ, ಸರ್ಕಾರವು ಈ ಕಾಯ್ದೆಯಿಂದ ರೈತರಿಗೆ ಹೊಸ ಅವಕಾಶ ದೊರೆಯುತ್ತದೆ ಎಂದು ಹೇಳಿದೆ.
ಇನ್ನು ಹಲವು ಕ್ರೀಡಾಪಟುಗಳು ತಮಗೆ ದೊರೆತ ಪ್ರಶಸ್ತಿ ಹಿಂದಿರುಗಿಸುವ ಮುಖೇನ ರೈತರ ಈ ಪ್ರತಿಭಟನೆಯನ್ನು ಬೆಂಬಲಿಸುವ ತೀರ್ಮಾಣ ಕೈಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತ ಕುಸ್ತಿಪಟು ಕರ್ತಾರ್ ಸಿಂಗ್, ಅರ್ಜುನ ಪ್ರಶಸ್ತಿ ಪುರಸ್ಕೃತ ಬಾಸ್ಕೆಟ್ಬಾಲ್ ಆಟಗಾರ ಸಜ್ಜನ್ ಸಿಂಗ್ ಚೀಮಾ, ಅರ್ಜುನ ಪ್ರಶಸ್ತಿ ಪಡೆದ ಹಾಕಿ ಆಟಗಾರ್ತಿ ರಾಜ್ಬೀರ್ ಕೌರ್ ಅವರು ತಮ್ಮ ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಅಷ್ಟೇ ಅಲ್ಲದೇ ಅವರು ಶನಿವಾರ ದೆಹಲಿಗೆ ಹೋಗಿ ತಮ್ಮ ಪ್ರಶಸ್ತಿಯನ್ನು ರಾಷ್ಟ್ರಪತಿ ಭವನದ ಹೊರಗೆ ಇರಿಸಲು ನಿರ್ಧರಿಸಿದ್ದಾರೆ.