ಬೆಂಗಳೂರು, ಡಿ.02 (DaijiworldNews/MB) : ''ಗೋಹತ್ಯೆ ನಿಷೇಧ ಕಾಯ್ದೆಯನ್ನು ಬಿಜೆಪಿ ಆಡಳಿತವಿರುವ ಗೋವಾದಲ್ಲಿ ಏಕೆ ಜಾರಿಗೊಳಿಸಿಲ್ಲ? ಕರ್ನಾಟಕದಲ್ಲಿಯೇ ಏಕೆ?'' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ''ಕುರುಬರ ಎಸ್ಟಿ ಹೋರಾಟದ ಹಿಂದೆ ಆರ್ಎಸ್ಎಸ್ನ ಕೈವಾಡವಿದೆ. ಇದು ಕುರುಬ ಸಮುದಾಯವನ್ನು ಒಡೆಯುವ ಹುನ್ನಾರದ ಭಾಗ. ಆರ್ಎಸ್ಎಸ್ ನ ದತ್ತಾತ್ರೇಯ ಹೊಸಬಾಳೆ ಹಾಗೂ ಸಂತೋಷ್ ಅವರು ಈಶ್ವರಪ್ಪ ಅವರನ್ನು ಬಳಸಿಕೊಂಡು ಕುರುಬ ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ'' ಎಂದು ದೂರಿದ್ದಾರೆ.
''ನಾವು ಕರೆದರೂ ಕುರುಬರ ಎಸ್ಟಿ ಮೀಸಲಾತಿ ಹೋರಾಟದಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸುತ್ತಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ. ಅವರು ನನ್ನನ್ನು ಕರೆದೂ ಇಲ್ಲ, ನಾನು ಬರುತ್ತೇನೆ ಅಥವಾ ಬರುವುದಿಲ್ಲ ಎಂದು ಅವರಿಗೆ ಹೇಳಿಲ್ಲ. ಈಶ್ವರಪ್ಪ ಈ ವಿಚಾರದಲ್ಲಿ ಸುಳ್ಳು ಹೇಳಿದ್ದಾರೆ'' ಎಂದು ಈಶ್ವರಪ್ಪ ವಿರುದ್ದ ಕಿಡಿಕಾರಿದ್ದಾರೆ.
''ಕುರುಬರ ನಾಯಕ ನಾನೇ ಎಂದು ಈಶ್ವರಪ್ಪ ಹೇಳಿಕೊಳ್ಳಲಿ. ಅದಕ್ಕೆ ನನ್ನ ತಕರಾರು ಇಲ್ಲ. ನಾಯಕ ಯಾರೆಂದು ಜನ ತೀರ್ಮಾನ ಮಾಡುತ್ತಾರೆ, ನಾವೇ ಘೋಷಿಸಿಕೊಳ್ಳುವುದಲ್ಲ'' ಎಂದು ಹೇಳಿದ್ದಾರೆ.
''ಈಶ್ವರಪ್ಪ ಅವರು ಎಂದೂ ಮೀಸಲಾತಿ ಪರ ಹೋರಾಟ ಮಾಡಿದವರಲ್ಲ. ಸದನದಲ್ಲಿಯೂ ಧ್ವನಿ ಎತ್ತಿದವರಲ್ಲ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅನ್ನು ಈಶ್ವರಪ್ಪ ಅವರು ಎಲ್ಲಿ ಬಿಟ್ಟರು? ಹೀಗೆ ಸ್ವಾರ್ಥಕ್ಕಾಗಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು'' ಎಂದು ಟೀಕಿಸಿದ್ದಾರೆ.
''ಗೋಹತ್ಯೆ ನಿಷೇಧ ಕಾಯ್ದೆಯನ್ನು ಬಿಜೆಪಿ ಆಡಳಿತವಿರುವ ಗೋವಾದಲ್ಲಿ ಏಕೆ ಜಾರಿಗೊಳಿಸಿಲ್ಲ? ಕರ್ನಾಟಕದಲ್ಲಿಯೇ ಏಕೆ? ಕಾಯ್ದೆ ಜಾರಿಯಾದರೆ ತಾವು ಕಷ್ಟ ನಷ್ಟಕ್ಕೆ ಈಡಾಗುತ್ತೇವೆ ಎಂಬ ಭಯದಿಂದ ಮುಸ್ಲಿಂ ಸಮುದಾಯದ ಮುಖಂಡರು ನನ್ನ ಬಳಿಗೆ ಬಂದಿದ್ದರು. ಅಧಿವೇಶನದಲ್ಲಿ ಈ ವಿಚಾರ ಚರ್ಚೆಗೆ ಬಂದಲ್ಲಿ ನಾವು ವಿರೋಧಿಸಲಿದ್ದೇವೆ'' ಎಂದು ಹೇಳಿದರು.
''ಉತ್ತರ ಪ್ರದೇಶದಲ್ಲಿ ಜಾರಿಯಿರುವ ಲವ್ ಜಿಹಾದ್ ತಡೆ ಕಾನೂನು ಅಸಂವಿಧಾನಿಕ. ನಿಗದಿತ ವಯೋಮಾನಕ್ಕೆ ಮೇಲ್ಪಟ್ಟ ಪ್ರತಿಯೊಬ್ಬರಿಗೂ ತಮಗೆ ಇಷ್ಟವಾಗುವ ವ್ಯಕ್ತಿಯನ್ನು ಮಧುವೆಯಾಗುವ ಸ್ವಾತಂತ್ರ್ಯ ಇದೆ. ಯಾವುದೇ ಒಂದು ಜಾತಿ ಇಂತಹುದೇ ಜಾತಿ - ಧರ್ಮದ ಹುಡುಗ ಅಥವಾ ಹುಡುಗಿಯನ್ನು ವಿವಾಹವಾಗಬೇಕೆಂಬ ಕಾನೂನು ನಮ್ಮ ಸಂವಿಧಾನದಲ್ಲಿ ಇಲ್ಲ'' ಎಂದರು.
''ಲವ್ ಜಿಹಾದ್ ನಿಷೇಧದಂತಹ ಕಾನೂನು ಜಾರಿಗೊಳಿಸಲು ಸಂವಿಧಾನ ಅವಕಾಶ ನೀಡಲ್ಲ, ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಕಾಯ್ದೆ ವಜಾಗೊಳ್ಳಲಿದೆ. ಇಂತಹಾ ಕಾಯ್ದೆಗಳಿಗೆ ಅವಕಾಶವಿಲ್ಲ ಎಂದು ಅಲಹಾಬಾದ್ ಹಾಗೂ ಕರ್ನಾಟಕದ ಉಚ್ಚ ನ್ಯಾಯಾಲಯಗಳು ಹೇಳಿವೆ. ಹಾಗಾಗಿ ಕಾಯ್ದೆ ಜಾರಿ ಅಸಾಧ್ಯ'' ಎಂದು ಹೇಳಿದರು.