ಕೊಪ್ಪ, ಡಿ.02 (DaijiworldNews/MB) : ರಾಜ್ಯದಲ್ಲೀಗ ಲವ್ ಜಿಹಾದ್ ವಿಚಾರ ಭಾರೀ ಚರ್ಚೆಯಾಗುತ್ತಿದ್ದು ಅಂತರ್ ಧರ್ಮೀಯ ವಿವಾಹ ನಿಷೇಧ ಕಾಯ್ದೆಯನ್ನು ತರಲು ಸರ್ಕಾರ ಮುಂದಾಗಿದೆ. ಈ ವಿಚಾರವಾಗಿ ವಿಪಕ್ಷ ಹಾಗೂ ಆಡಳಿತಾರೂಢ ಬಿಜೆಪಿ ನಡುವೆ ವಾಕ್ಸಮರ ನಡೆಯುತ್ತಲ್ಲೇ ಇದೆ.
ಮಂಗಳವಾರ ಈ ವಿಚಾರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರು, ''ಸಿದ್ದರಾಮಯ್ಯರಿಗೆ ಕ್ರಾಸ್ ಬ್ರೀಡ್ ಬಗ್ಗೆ ಬಹಳ ಆಸಕ್ತಿ. ಅವರ ಪಕ್ಷದ ನಾಯಕಿಯರಾದ ಇಂದಿರಾ ಗಾಂಧಿ ಯಾರನ್ನೋ ಮದುವೆಯಾಗಿದ್ದರು, ಸೋನಿಯಾ ಗಾಂಧಿ ಅವರು ಇನ್ಯಾರನ್ನೋ ಮದುವೆಯಾದರು'' ಎಂದು ವ್ಯಂಗ್ಯವಾಡಿದ್ದಾರೆ.
''ಸಿದ್ದರಾಮಯ್ಯರವರು ಮುಸ್ಲಿಮರನ್ನು ಓಲೈಕೆ ಮಾಡಿದ್ದರಿಂದಾಗಿ ಮಂಗಳೂರಿನಲ್ಲಿ ಗೋಹತ್ಯೆ ವಿಚಾರದಲ್ಲಿ ಹಿಂದೂ ಯುವಕರ ಹತ್ಯೆಯಾಗಿದೆ. ನೀವು ಮುಸ್ಮಿಮರ ಓಲೈಕೆ ಮಾಡಿದರೆ ಹಿಂದೂ ಸಮಾಜವು ಮತ್ತಷ್ಟು ಜಾಗೃತವಾಗುತ್ತದೆ ಎಂಬುದನ್ನು ಸಿದ್ದರಾಮಯ್ಯನವರು ನೆನಪಲ್ಲಿ ಇಟ್ಟುಕೊಳ್ಳಬೇಕು'' ಎಂದು ಹೇಳಿದರು.
ಹಾಗೆಯೇ ಸಿದ್ದರಾಮಯ್ಯನವರು ಅಂತರ್ ಧರ್ಮೀಯ ವಿವಾಹ ನಿಷೇಧ ಕಾಯ್ದೆ ಜಾರಿಗೆ ವಿರೋಧ ವ್ಯಕ್ತಪಡಿಸಿ ನೀಡಿದ ಹೇಳಿಕೆಗಳಿಗೆ ಸಂಬಂಧಿಸಿ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.