ಬೆಂಗಳೂರು, ಡಿ. 01 (DaijiworldNews/SM): ಮೈತ್ರಿ ಸರಕಾರವನ್ನು ಕೆಡವಿ ಬಿಜೆಪಿ ಪಕ್ಷ ಅಧಿಕಾರಕ್ಕೇರಲು ಪ್ರಮುಖರೆಣಿಸಿಕೊಂಡಿದ್ದ ವಿಶ್ವನಾಥ್ ಹುಣಸೂರು ಉಪ ಚುನಾವಣೆಯಲ್ಲಿ ತನ್ನ ಸೋಲಿನ ಕಾರಣ ಬಹಿರಂಗ ಪಡಿಸಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
ನನ್ನ ಸೋಲಿಗೆ ಸಿ.ಪಿ.ಯೋಗೀಶ್ವರ್ ಹಾಗೂ ಎನ್.ಆರ್.ಸಂತೋಷ್ ಕಾರಣವೆಂದು ಮಾಜಿ ಸಚಿವ ಎಚ್.ವಿಶ್ವನಾಥ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಣಸೂರು ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಹಾಗೂ ಪಕ್ಷದಿಂದ ಚುನಾವಣಾ ಖರ್ಚಿಗಾಗಿ ನೀಡಿದ ದೊಡ್ಡಮಟ್ಟದ ಹಣವನ್ನು ಸಿ.ಪಿ. ಯೋಗೀಶ್ವರ್ ಹಾಗೂ ಎನ್.ಆರ್ ಸಂತೋಷ್ ಲಪಟಾಯಿಸಿದ್ದಾರೆ ಎಂಬುವುದಾಗಿ ಆರೋಪಿಸಿದ್ದಾರೆ.
ಉಪ ಚುನಾವಣೆ ಅಭ್ಯರ್ಥಿ ಘೋಷಣೆಗೂ ಮುನ್ನವೇ ತಾನೆ ಅಭ್ಯರ್ಥಿ ಎಂದು ಎಲ್ಲೆಡೆ ಫ್ಲೆಕ್, ಬ್ಯಾನರ್ ಹಾಕಿಹೊಂಡು ಪ್ರಚಾರ ಮಾಡಿದರು. ಆದರೆ ಸೀರೆ ಕುಕ್ಕರ್ ಗಳನ್ನು ಬಹಿರಂಗವಾಗಿಯೇ ವಿತರಿಸಿ ಸಿಕ್ಕಿಬಿದ್ದರು. ಮಾಧ್ಯಮಗಳಲ್ಲಿಯೂ ಇದು ಭಾರೀ ಸುದ್ದಿಯಾಗಿತ್ತು. ಹೀಗಾಗಿ ನನ್ನ ಸೋಲಿಗೆ ಇದೂ ಕಾರಣವಾಗಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ.