ನವದೆಹಲಿ, ಡಿ.01 (DaijiworldNews/MB) : ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ಆರು ದಿನಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಕೆನಡಾ ಪ್ರಧಾನಿ ಜಸ್ಟೀನ್ ಟ್ರಡೋ ಅವರ ಹೇಳಿಕೆಯು ಅನಗತ್ಯವೆಂದು ಭಾರತ ಪ್ರತಿಕ್ರಿಯಿಸಿದೆ.
ಈ ಬಗ್ಗೆ ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾತ್ಸವ, ''ರಾಜಕೀಯ ಉದ್ದೇಶಕ್ಕೆ ರಾಜತಾಂತ್ರಿಕವಾದ ವಿಚಾರಗಳನ್ನು ನೀವು ಬಳಸಬಾರದು. ಅಷ್ಟಕ್ಕೂ ಭಾರತದ ಆಂತರಿಕ ವಿಚಾರಕ್ಕೆ ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋ ಮೂಗು ತೂರಿಸಿರುವುದು ಸರಿಯಲ್ಲ'' ಎಂದು ಹೇಳಿದ್ದಾರೆ.
''ಪ್ರಜಾತಾಂತ್ರಿಕ ದೇಶವಾಗಿರುವ ಭಾರತದಲ್ಲಿ ಸರ್ಕಾರ ಹಾಗೂ ಸಮಾಜದ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಉಂಟಾಗುವುದು ಸಹಜವಾದದ್ದು ಎಂದು ಹೇಳಿರುವ ಭಾರತ ವಿದೇಶಾಂಗ ಸಚಿವಾಲಯ ರೈತರ ಪ್ರತಿಭಟನೆ ಕೂಡಾ ಸಹಜವಾದ ಭಿನ್ನಾಭಿಪ್ರಾಯ'' ಎಂದು ಹೇಳಿದೆ.
''ಭಾರತವು ತಮ್ಮ ದೇಶಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ತಾನಾಗಿಯೇ ಪರಿಹರಿಸುತ್ತದೆ. ಅದಕ್ಕೆ ಕೆನಡಾದ ಪ್ರಧಾನಿ ಮೂಗು ತೂರಿಸಬಾರದು'' ಎಂದು ಹೇಳಿದ್ದಾರೆ.
ಕೆನಡಾ ಪ್ರಧಾನಿ ಜಸ್ಟೀನ್ ಟ್ರಡೋ, ''ಭಾರತದಲ್ಲಿ ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಆತಂಕಕಾರಿಯಾಗಿದೆ. ನಾವು ನಮ್ಮ ಸ್ನೇಹಿತರು ಹಾಗೂ ಸಂಬಂಧಿಕರ ಬಗ್ಗೆ ಚಿಂತಿತರಾಗಿದ್ದೇವೆ'' ಎಂದು ಹೇಳಿದ್ದರು.