ನವದೆಹಲಿ, ಡಿ.01 (DaijiworldNews/PY): "ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ತೀವ್ರವಾಗುತ್ತಿದ್ದು, ದಕ್ಷಿಣದ ರಾಜ್ಯಗಳಾದ ತಮಿಳುನಾಡು, ಕೇರಳ, ಪುದುಚೇರಿ ಹಾಗೂ ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಭಾರಿ ಮಳೆ ಸುರಿಯಲಿದೆ" ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಸಾಂದರ್ಭಿಕ ಚಿತ್ರ
ಮಂಗಳವಾರ ಸಂಜೆಯ ವೇಳೆಗೆ ಗಾಳಿಯ ವೇಗವು 80 ಕಿ.ಮೀ.ಗಿಂತಲೂ ಅಧಿಕವಾಗುವ ಸಾಧ್ಯತೆ ಎನ್ನಲಾಗಿದ್ದು, ಈ ಚಂಡಮಾರುತಕ್ಕೆ ಬುರೆವಿ ಎಂದು
ಹೆಸರಿಸಲಾಗಿದೆ.
"ಪ್ರಸ್ತುತ ಚಂಡಮಾರುತವು ಕನ್ಯಾಕುಮಾರಿಯ ಆಗ್ನೇಯಕ್ಕೆ 930 ಕಿ.ಮೀ ದೂರದಲ್ಲಿ ಬೀಸುತ್ತಿದೆ. ಪ್ರಸ್ತುತ ಚಂಡಮಾರುತವು ವಾಯುವ್ಯ ದಿಕ್ಕಿನಲ್ಲಿ ಮುಂದುವರೆದರೆ ಡಿ.2ರ ಸಂಜೆ ಅಥವಾ ರಾತ್ರಿಯ ವೇಳೆ ಶ್ರೀಲಂಕಾ ಕರಾವಳಿಯನ್ನು ದಾಟಲಿದ್ದು, ನಂತರ ಪಶ್ಚಿಮದತ್ತ ತಿರುಗಲಿದೆ. ಮರುದಿನ ಬೆಳಗ್ಗೆ ಭಾರತದ ಕರಾವಳಿಯನ್ನು ತಲುಪಲಿದೆ" ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪುದುಚೇರಿಯ ಕಾರೈಕಲ್ನಲ್ಲಿ ನ.25ರಂದು ಭೂಕುಸಿತಕ್ಕೆ ಕಾರಣವಾಗಿದ್ದ ನಿವಾರ್ ಚಂಡಮಾರುತದ ನಂತರ ಬುರೇವಿ ಚಂಡಮಾರುತ ಬರಲಿದೆ. ಇದು 2020ರಲ್ಲಿ ಭಾರತದ ಕರಾವಳಿಯನ್ನು ಅಪ್ಪಳಿಸಲಿರುವ ಮೂರನೆಯ ಚಂಡಮಾರುತವಾಗಲಿದೆ.
ಬುರೇವಿ ಚಂಡಮಾರುತ ಭಾರತಕ್ಕೆ ಸಮೀಪಿಸುತ್ತಿರುವುದರಿಂದ ಡಿಸೆಂಬರ್ 2 ರಂದು ತಮಿಳುನಾಡು ಹಾಗೂ ಕೇರಳ ಕರಾವಳಿಯಲ್ಲಿ ಗಂಟೆಗೆ 65 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಡಿಸೆಂಬರ್ 3 ರಂದು ಭಾರತದ ಕರಾವಳಿಯನ್ನು ತಲುಪುವ ಸಾಧ್ಯತೆಯಿದ್ದು, ದಕ್ಷಿಣ ಭಾಗದ ಕೆಲವು ಭಾಗಗಳಿಗೆ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆ ಈ ಪ್ರದೇಶದಲ್ಲಿ ಮೀನುಗಾರಿಕೆ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಸರ್ಕಾರ ಸಲಹೆ ನೀಡಿದ್ದು,. ಮೀನುಗಾರರಿಗೆ ಸೋಮವಾರದೊಳಗೆ ಕರಾವಳಿಗೆ ಮರಳಲು ಸೂಚಿಸಲಾಗಿದೆ.