ಚಿಕ್ಕಮಗಳೂರು, ಡಿ.01 (DaijiworldNews/PY): "ಬಿಜೆಪಿಗರು ಮಾತ್ರ ದೇಶಕ್ಕೆ ಜೈಕಾರ ಕೂಗುವುದು ಎಂದುಕೊಂಡಿದ್ದರಿಂದ ಕಾಂಗ್ರೆಸ್ಗೆ ಇಂದು ಹೀನಾಯ ಸ್ಥಿತಿಗೆ ತಲುಪಿದೆ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದರು.
ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನಲ್ಲಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ತಮ್ಮ ಸಿದ್ದಾಂತದ ಪ್ರಕಾರ ಕೈ ನಾಯಕರು ಕೆಲಸ ಮಾಡುವುದಿಲ್ಲ. ಕಾಂಗ್ರೆಸ್ ಕಚೇರಿಯಲ್ಲಿ ಭಾರತ್ ಮಾತಾ ಕೀ ಜೈ ಎಂದು ಕೈಕಾರ ಕೂಗಬೇಡಿ. ಬಿಜೆಪಿಯವರಂತೆ ನೀವು ಏಕೆ ಈ ರೀತಿ ಜೈಕಾರ ಹಾಕುತ್ತೀರಾ? ಎಂದು ಕಾರ್ಯಕರ್ತರಿಗೆ ಗದರಿಸುತ್ತಾರೆ" ಎಂದು ಹೇಳಿದರು.
"ಕೈ ನಾಯಕರು ಸೋತ ಕೂಡಲೇ ಇವಿಎಂ ಸರಿ ಇಲ್ಲ ಎಂದು ಆರೋಪ ಮಾಡುತ್ತಾರೆ. ಆದರೆ, ನಾವು ಹಾಗಲ್ಲ ಜನರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತೇವೆ. ಅಲ್ಲದೇ, ಪಕ್ಷದ ಚಟುವಟಿಕೆಯಲ್ಲಿಯೂ ಕೂಡಾ ನಿರಂತರವಾಗಿ ಪಾಲ್ಗೊಳ್ಳುತ್ತೇವೆ. ಸಂಘಟನೆ ಕಟ್ಟಿ, ಪಕ್ಷವನ್ನು ಬೆಳೆಸುವ ಕಾರ್ಯವನ್ನು ನಾವು ಮಾಡುತ್ತೇವೆ" ಎಂದು ಕಾಂಗ್ರೆಸ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಹೆಚ್.ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಕೊಡುವಂತಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಯಾವ ಹಿನ್ನೆಲೆಗೆ ತೀರ್ಪು ಬಂದಿದೆ ಎಂದು ನೋಡಿಲ್ಲ. ಅಲ್ಲದೇ, ತೀರ್ಪನ್ನು ನಾನು ಅಧ್ಯಯನವೂ ಮಾಡಿಲ್ಲ. ಹೈಕೋರ್ಟ್ ತೀರ್ಪಿನ ನಂತರ ಈ ಬಗ್ಗೆ ಪ್ರತಿಕ್ರಿಯೆ ನೀಡುವುದು ಉತ್ತಮ" ಎಂದರು.