ಗುಜರಾತ್, ಡಿ.01 (DaijiworldNews/MB) : ಮುಂಬೈನಲ್ಲಿ ಕಳೆದ ಹನ್ನೆರಡು ವರ್ಷಗಳ ಹಿಂದೆ ನಡೆದ ಮುಂಬೈ ದಾಳಿಗೂ ಮುನ್ನ ಉಗ್ರರು ಐವರು ಮೀನುಗಾರರನ್ನು ಹತ್ಯೆ ಮಾಡಿದ್ದು ಹನ್ನೆರಡು ವರ್ಷಗಳ ಬಳಿಕ ಮೂವರು ಮೃತ ಮೀನುಗಾರರ ಕುಟುಂಬಕ್ಕೆ ಪರಿಹಾರ ಧನ ಲಭಿಸಿದೆ.
ಕ್ಯಾಪ್ಟನ್ ಅಮರ್ಸಿಂಗ್ ಸೋಲಂಕಿ ಹಾಗೂ ಇನ್ನೋರ್ವ ಮೀನುಗಾರರ ಕುಟುಂಬದವರಿಗೆ ಈಗಾಗಲೇ ಅಧಿಕಾರಿಗಳು ಪರಿಹಾರ ಧನ ನೀಡಿದ್ದು ಇನ್ನುಳಿದ ಮೂವರು ಮೃತ ಮೀನುಗಾರರ ಕುಟುಂಬಕ್ಕೆ ಪರಿಹಾರ ಧನ ನೀಡಿರಲಿಲ್ಲ. ಈಗ 12 ವರ್ಷಗಳ ಬಳಿಕ ಗುಜರಾತ್ನ ಜಲಾಲ್ಪುರದ ವ್ಯಾನ್ಸಿ ಗ್ರಾಮದ ನಿವಾಸಿಗಳಾಗಿದ್ದ ಮೃತ ಮೀನುಗಾರರಾದ ನಾತು ರಾಥೋಡ್, ಮುಖೇಶ್ ರಾಥೋಡ್ ಮತ್ತು ಬಲ್ವಂತ್ ತಾಂಡೇಲ್ ಕುಟುಂಬಕ್ಕೆ ಗುಜರಾತ್ ಸರ್ಕಾರವು ತಲಾ 5 ಲಕ್ಷ ಪರಿಹಾರ ಧನ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ನವಸಾರಿ ಜಿಲ್ಲೆಯ ವಿಪತ್ತು ನಿರ್ವಹಣಾ ಇಲಾಖೆಯ ಕಂದಾಯ ಅಧಿಕಾರಿ ರೋಶ್ನಿ ಪಟೇಲ್, ''ಕಳೆದ ವಾರ ಈ ಮೂವರು ಮೃತರ ಕುಟುಂಬಕ್ಕೆ ಠೇವಣಿ ರೂಪದಲ್ಲಿ ಹಣ ನೀಡಲಾಗಿದೆ. ಈ ಹಣವನ್ನು ಮೂರು ವರ್ಷಗಳ ಕಾಲ ನಿಗದಿತ ಠೇವಣಿಯಲ್ಲಿ ಇರಿಸಲಾಗಿದೆ. ಇದರ ದಾಖಲೆಯನ್ನು ಹಸ್ತಾಂತರ ಮಾಡಲಾಗಿದೆ'' ಎಂದು ತಿಳಿಸಿದರು.