ವಿಜಯಪುರ, ಡಿ.01 (DaijiworldNews/MB) : ಕನ್ನಡ ಪರ ಹೋರಾಟಗಾರರನ್ನು ರೋಲ್ ಕಾಲ್ ಹೋರಾಟಗಾರರು ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆ ವಿರುದ್ದ ಪ್ರತಿಭಟನೆ ನಡೆಸಲೆಂದು ಬೆಂಗಳೂರಿನಿಂದ ವಿಜಯಪುರಕ್ಕೆ ತೆರಳುತ್ತಿದ್ದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಸಾ.ರಾ. ಗೋವಿಂದ್ ಸೇರಿದಂತೆ 50ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಮಾತನಾಡಿದ ವಾಟಾಲ್ ನಾಗರಾಜ್, ''ಡಿ 5 ರ ಬಂದ್ ಬಳಿಕ ರಾಜ್ಯದಾದ್ಯಂತ ಜೈಲು ಭರೋ ಚಳುವಳಿ ನಡೆಸಲಾಗುತ್ತದೆ. 15 ದಿನದೊಳಗೆ ವಿಜಯಪುರಕ್ಕೆ ಬಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತೇವೆ. ಆಗ ಸಾಧ್ಯವಾದರೆ ನನ್ನನ್ನು ತಡೆದು ನೋಡಿ ಎಂದು ಪೊಲೀಸರಿಗೆ ಸವಾಲೆಸೆದಿದ್ದು ನಾವು ಕರ್ನಾಟಕ ಬಂದ್ ಸಿದ್ಧತೆಗಾಗಿ ವಿಜಯಪುರಕ್ಕೆ ಹೋಗುತ್ತಿದ್ದೆವು. ಆದರೆ ಪೊಲೀಸರು ನಮ್ಮನ್ನು ಇಲ್ಲಿಯೇ ಬಂಧನ ಮಾಡಿದ್ದಾರೆ'' ಎಂದು ಹೇಳಿದ್ದಾರೆ.
''ನಾನು ನನ್ನ ಜೀವನದಲ್ಲಿ ಹಲವಾರು ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಆದರೆ ಬಿ ಎಸ್ ಯಡಿಯೂರಪ್ಪನಂತೆ ಯಾರೂ ಕೂಡಾ ಕನ್ನಡ ಪರವಾದ ಹೋರಾಟಗಳನ್ನು ಧಮನಿಸಿಲ್ಲ'' ಎಂದು ಬಿಎಸ್ವೈ ವಿರುದ್ದ ಕಿಡಿಕಾರಿದರು.
''ಈಗ ಬಿಎಸ್ವೈ ಸರ್ಕಾರ ಮರಾಠಿ ಪ್ರಾಧಿಕಾರ ಆರಂಭಿಸಿದೆ. ಇನ್ನು ಸ್ವಲ್ಪ ಸಮಯ ಹೋದರೆ ತೆಲುಗು, ತಮಿಳು, ಮಾರವಾಡಿ, ಮಲಯಾಳಂ ಪ್ರಾಧಿಕಾರ ಮಾಡಿ ಸಂಪುಟದಲ್ಲಿ ಕನ್ನಡಿಗರಿಗಿಂತ ಅಧಿಕ ಅವರಿಗೆ ಸ್ಥಾನಮಾನ ನೀಡಬೇಕಾದೀತು. ಇದರಿಂದಾಗಿ ಕನ್ನಡ ಭಾಷೆಗೆ ಭಾರೀ ಅಪಾಯವಿದೆ'' ಎಂದು ಆತಂಕ ವ್ಯಕ್ತಪಡಿಸರು.