ಬೆಂಗಳೂರು, ಡಿ.01 (DaijiworldNews/PY): ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ್ ಅವರು ಬಿಪಿಎಲ್ ಕುಟುಂಬಳಿಗೆ ಸಿಹಿಸುದ್ದಿ ನೀಡಿದ್ದು, "ಬಿಪಿಎಲ್ ಕುಟುಂಬಗಳಿಗೆ ಉಚಿತ ಕೊರೊನಾ ಲಸಿಕೆ ನೀಡಲಾಗುತ್ತದೆ" ಎಂದಿದ್ದಾರೆ.
ವಿಶ್ವ ಏಡ್ಸ್ ದಿನದ ಅಂಗವಾಗಿ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, "ಭಾರತದಲ್ಲಿ ಕೊರೊನಾ ನಿಯಂತ್ರಣ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ. ಕೊರೊನಾಕ್ಕೆ ಲಸಿಕೆ ಕಂಡು ಹಿಡಿಯಲಾಗುತ್ತಿದೆ. ಪ್ರಥಮ ಹಂತದಲ್ಲಿ ಸುಮಾರು ಹತ್ತು ಕೋಟಿ ಮಂದಿಗೆ ಲಸಿಕೆಯ ಪ್ರಯೋಜನ ಲಭ್ಯವಾಗಲಿದೆ. ಇದರ ಜವಾಬ್ದಾರಿಯನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ನೋಡಿಕೊಳ್ಳುತ್ತಿದ್ದಾರೆ. ಕೊರೊನಾ ಲಸಿಕೆಯನ್ನು ಬಿಪಿಎಲ್ ಕುಟುಂಬಳಿಗೆ ಉಚಿತವಾಗಿ ನೀಡಲು ಸರ್ಕಾರ ತೀರ್ಮಾನಿಸಿದೆ" ಎಂದು ಹೇಳಿದ್ದಾರೆ.
"ಎಲ್ಲರೂ ಕೂಡಾ ಅತ್ಯಂತ ಜಾಗರೂಕರಾಗಿರಬೇಕು. ಅಲ್ಲದೇ, ಕೊರೊನಾ ಮಾರ್ಗಸೂಚಿಗಳನ್ನು ಕೂಡಾ ಕಡ್ಡಾಯವಾಗಿ ಪಾಲಿಸಬೇಕು" ಎಂದು ತಿಳಿಸಿದ್ದಾರೆ.