ಚಾಮರಾಜನಗರ, ಡಿ.01 (DaijiworldNews/PY): "ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಪಕ್ಷವನ್ನು ನಂಬಿ ಬಂದವರಿಗೆ ಬೆಂಬಲ ನೀಡಿದ್ದಾರೆ" ಎಂದು ಹೇಳುವ ಮುಖೇನ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಹೆಚ್.ವಿಶ್ವನಾಥ್ ಅವರ ಹೇಳಿಕೆಗೆ ಟಾಂಗ್ ನೀಡಿದರು.
ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1'ವಿಶ್ವನಾಥ್ ಅವರು ಹಿರಿಯರು. ಅವರಿಗೆ ಹೈಕೋರ್ಟ್ ತೀರ್ಪು ಆಘಾತ ತಂದಿದೆ. ಮುಂದಿನ ನಡೆಯ ಬಗ್ಗೆ ಹಿಯರು ಕುಳಿತುಕೊಂಡು ನಿರ್ಧಾರ ತೆಗೆದುಕೊಳ್ಳುತ್ತಾರೆ" ಎಂದು ಹೇಳಿದರು.
"ಪಕ್ಷದೊಳಗೆ ವಿಶ್ವನಾಥ್ ಅವರನ್ನು ನಿರ್ಲಕ್ಷಿಸುತ್ತಿರುವ ಬಗ್ಗೆ ನನಗೆ ತಿಳಿದಿಲ್ಲ. ಮುಖ್ಯಮಂತ್ರಿ ಹಾಗೂ ರಾಜ್ಯಾಧ್ಯಕ್ಷರು ಮೇಲ್ಮನವಿ ಸಲ್ಲಿಸುವ ವಿಚಾರವಾಗಿ ಚರ್ಚಿಸುತ್ತಾರೆ" ಎಂದರು.
ಮಗ ಆರ್ಟಿಜಿಎಸ್ ಮೂಲಕ, ತಂದೆ ಚೆಕ್ ಮೂಲಕ ಲಂಚ ತೆಗೆದುಕೊಳ್ಳುತ್ತಾರೆ ಎಂಬ ಸಿದ್ದರಾಮಯ್ಯ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ಸಿದ್ದರಾಮಯ್ಯ ಓರ್ವ ವಕೀಲ. ಆರ್ಟಿಜಿಎಸ್ ಅಥವಾ ಚೆಕ್ ಮೂಲ ಲಂಚ ತೆಗೆದುಕೊಂಡಿದ್ದರೆ ಅದನ್ನು ಮಾಧ್ಯಮಗಳ ಮುಂದೆ ಪ್ರಸ್ತುತಪಡಿಸಲಿ. ಬಿಜೆಪಿ ಬಗ್ಗೆ ವಿರೋಧ ಪಕ್ಷಗಳಿಗೆ ಮಾತನಾಡಲು ಏನು ಇಲ್ಲ. ವಿಪಕ್ಷಗಳು ಚುನಾವಣೆಯನ್ನು ಎದುರಿಸುವಂತಹ ನೈತಿಕ ಸ್ಥೈರ್ಯವನ್ನು ಕಳೆದುಕೊಂಡಿವೆ. ಈ ಹಿನ್ನೆಲೆ ಹತಾಶರಾಗಿ ಬಿಎಸ್ವೈ ಅವರ ಬಗ್ಗೆ ಏನೇನೋ ಹೇಳಿಕೆಗಳನ್ನು ನೀಡುತ್ತಿದ್ದಾರೆ" ಎಂದು ಹೇಳಿದರು.
ಸಾ.ರಾ ಮಹೇಶ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ಈ ರೀತಿ ಹೇಳೊದಕ್ಕೆ ಯಾರ್ರೀ ಅವರು. ನಾನು ಅವರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ" ಎಂದರು.
ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಮಾತನಡಿದ ಅವರು, "ಶೀಘ್ರದಲ್ಲೇ ಸಂಪುಟ ವಿಸ್ತರಣೆಯಾಗಲಿದೆ" ಎಂದು ತಿಳಿಸಿದರು.