ಗುವಾಹತಿ, ಡಿ.01 (DaijiworldNews/MB) : ವಿವಾಹ ಮಾತುಕತೆಗೂ ಮುನ್ನ ಧರ್ಮ, ಉದ್ಯೋಗ ಘೋಷಣೆ ಕಡ್ಡಾಯಗೊಳಿಸುವ ಅಂಶಗಳನ್ನು ಒಳಗೊಂಡ ಹೊಸ ಕಾನೂನು ಜಾರಿಗೆ ತರಲು ಅಸ್ಸಾಂ ಸರ್ಕಾರ ಚಿಂತನೆ ನಡೆಸುತ್ತಿದೆ.
ಈ ಸಂಬಂಧ ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ ಅಸ್ಸಾಂ ಸಚಿವ ಹಿಮವಂತ ಬಿಸ್ವಾ ಶರ್ಮಾ, ''ಪುರುಷರಾಗಲಿ ಮಹಿಳೆಯರಾಗಲಿ ತಮ್ಮ ವಿವಾಹಕ್ಕೂ ಮುನ್ನ ಧರ್ಮ, ಉದ್ಯೋಗ ಹಾಗೂ ಆದಾಯವನ್ನು ಘೋಷಿಸಿ ಬಳಿಕ ವಿವಾಹದ ಮಾತುಕತೆ ನಡೆಸಬೇಕು. ಈ ಸಂಬಂಧ ಕರಡು ಮಸೂದೆಯನ್ನು ಸರ್ಕಾರ ಸಿದ್ದಪಡಿಸುತ್ತಿದೆ'' ಎಂದು ತಿಳಿಸಿದ್ದಾರೆ.
ದೇಶದ ಕೆಲವು ರಾಜ್ಯಗಳಲ್ಲಿ ಅಂತರ್ ಧರ್ಮೀಯ ವಿವಾಹ ವಿರೋಧಿ ಕಾಯ್ದೆ ಜಾರಿಗೆ ತರುವ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ವಿವಾಹಕ್ಕೆ ಸಂಬಂಧಿಸಿ ಅಸ್ಸಾಂ ಸರ್ಕಾರದ ಹೊಸ ಕಾನೂನು ರಚನೆಗೆ ಮುಂದಾಗಿರುವುದು ಮಹತ್ವ ಪಡೆದಿದೆ.
ಆದರೆ ಈ ಬಿಸ್ವಾ ಶರ್ಮಾ ಅವರು, ''ಈ ಕಾನೂನು ಮಹಿಳೆಗೆ ಅನುಕೂಲವಾಗಿರುತ್ತದೆಯೇ ಹೊರತು ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಕಾನೂನಿನಂತೆ ಈ ಕಾನೂನು ಅಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.
''ಪತಿ ಪತ್ನಿಯರ ಮಧ್ಯೆ ಯಾವುದೇ ಮುಚ್ಚುಮರೆ ಇರಬಾರದು ಹಾಗೂ ಅವರು ಪರಸ್ಪರದ ಎಲ್ಲಾ ವಿಚಾರವನ್ನು ತಿಳಿದುಕೊಂಡಿರಬೇಕು. ಮಹಿಳಾ ಸಬಲೀಕರಣ ಮಾಡುವ ದೃಷ್ಟಿಯಿಂದ ಈ ಮಸೂದೆಯನ್ನು ರಚನೆ ಮಾಡಲಾಗುತ್ತಿದೆ'' ಎಂದು ಹೇಳಿದ್ದಾರೆ.
ಇನ್ನು ಈ ವೇಳೆ 'ಲವ್ ಜಿಹಾದ್' ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ''ನಮ್ಮ ಈ ಹೊಸ ಕಾನೂನಿನ ಆಲೋಚನೆ 'ಲವ್ ಜಿಹಾದ್' ಗೆ ಸಂಬಂಧಿಸಿದ್ದಲ್ಲ. ಬದಲಾಗಿ ವಧು ವರರ ನಡುವೆ ಯಾವುದೇ ಮುಚ್ಚುಮರೆ ಇರಬಾರದು ಎಂಬ ದೃಷ್ಟಿಯಿಂದ ಹಾಗೂ ಇಬ್ಬರ ನಡುವೆ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಈ ಮಸೂದೆ ರಚಿಸಲಾಗುತ್ತಿದೆ. ಹಾಗೆಯೇ ಮಹಿಳಾ ಸಬಲೀಕರಣ ಮಾಡುವ ಸಲುವಾಗಿ ಈ ಕಾನೂನು ಬೇಕಾಗಿದೆ'' ಎಂದು ತಿಳಿಸಿದ್ದಾರೆ.