ನವದೆಹಲಿ, ಡಿ.01 (DaijiworldNews/MB) : ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ದೆಹಲಿ ಚಲೋ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದ್ದು ರೈತರ ಪ್ರತಿಭಟನೆಗೆ ಸಂಬಂಧಿಸಿ ಚರ್ಚೆ ನಡೆಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ನಿವಾಸದಲ್ಲಿ ಪಕ್ಷದ ಹಿರಿಯ ನಾಯಕರು ಸಭೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದೆ ಕೇಂದ್ರ ಸರ್ಕಾರವು ಡಿಸೆಂಬರ್ 3 ರೈತರೊಂದಿಗೆ ಚರ್ಚೆ ನಡೆಸಲಾಗುವುದು, ಆದರೆ ಅದಕ್ಕೂ ಮುನ್ನ ರೈತರು ಸರ್ಕಾರ ನಿಗದಿಪಡಿಸಿದ ಬುರಾಡಿ ಮೈದಾನಕ್ಕೆ ತೆರಳಿ ಅಲ್ಲಿ ಪ್ರತಿಭಟನೆ ಮಾಡಬೇಕು ಎಂಬ ಷರತ್ತು ವಿಧಿಸಿತ್ತು. ಈ ಮೊದಲೇ ಷರತ್ತಿನ ಮೇರೆಗೆ ಯಾವುದೇ ಮಾತುಕತೆಗೆ ಮುಂದಾಗುವುದಿಲ್ಲ ಎಂದು ಹೇಳಿದ್ದ ರೈತರು ಕೇಂದ್ರ ಸರ್ಕಾರದ ಈ ಷರತ್ತು ಬದ್ದ ಆಹ್ವಾನವನ್ನು ನಿರಾಕರಿಸಿ ಸಿಂಗು ಮತ್ತು ಟಿಕ್ರಿ ಗಡಿಗಳಲ್ಲಿ ಪ್ರತಿಭಟನೆ ಮುಂದುವರಿಸಿದ್ದರು.
ಆದರೆ ಬಳಿಕ ರೈತರ ಪ್ರತಿಭಟನೆಗೆ ಮಣಿದಿರುವ ಕೇಂದ್ರ ಸರ್ಕಾರ ರೈತರನ್ನು ಮಾತುಕತೆಗೆ ಕರೆದಿತ್ತು. ಆದರೆ ಸರ್ಕಾರದ ಈ ಆಹ್ವಾನವನ್ನು ತಿರಸ್ಕರಿಸಿದೆ. ದೇಶದ ಎಲ್ಲ ರೈತ ಸಂಘಟನೆಗಳನ್ನು ಚರ್ಚೆಗೆ ಕರೆಯದಿದ್ದರೆ ನಾವು ಬರುವುದಿಲ್ಲ ಎಂದು ಪಂಜಾಬ್ ರೈತ ಸಂಘರ್ಷ ಸಮಿತಿ ಕೇಂದ್ರ ಸರಕಾರಕ್ಕೆ ತಿಳಿಸಿದೆ.
ಈ ನಿಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ನಿವಾಸದಲ್ಲಿ ಪಕ್ಷದ ಹಿರಿಯ ನಾಯಕರು ಸಭೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಹಾಗೆಯೇ ಈ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಏತನ್ಮಧ್ಯೆ ಅಖಿಲ ಭಾರತ ಕಿಸಾನ್ ಸಭಾವು ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಡಿಸೆಂಬರ್ 3ರಂದು ರಸ್ತೆ ತಡೆ ಚಳವಳಿಗೆ ಕರೆ ನೀಡಿದೆ.