ಬೆಂಗಳೂರು, ಡಿ.01 (DaijiworldNews/PY): "ಮಾಜಿ ಸಚಿವ ಸಾ.ರಾ.ಮಹೇಶ್ ಅವರು ಕೊಚ್ಚೆ ಗುಂಡಿ, ಪದೇ ಪದೇ ಕಲ್ಲೆಸೆದು ಶುಭ್ರ ಬಟ್ಟೆಗೆ ಕೊಳೆ ಮಾಡಿಕೊಳ್ಳಲಾರೆ. ನಾನು ಅವರ ಬಗ್ಗೆ ಮಾತನಾಡುವುದಿಲ್ಲ" ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿರುಗೇಟು ನೀಡಿದ್ದಾರೆ.
ಸಾ.ರಾ. ಮಹೇಶ್ ಅವರು ಹೈಕೋರ್ಟ್ನ ತೀರ್ಪಿನ ವಿಚಾರವಾಗಿ ಎಚ್.ವಿಶ್ವನಾಥ್ ಅವರಿಗೆ ನ್ಯಾಯದೇವತೆ ಶಿಕ್ಷೆ ನೀಡಿದ್ದಾಳೆ ಎಂದಿದ್ದರು. ಸಾ.ರಾ. ಮಹೇಶ್ ಅವರ ಈ ಹೇಳಿಕೆಗೆ ತಿರುಗೇಟು ನೀಡಿರುವ ವಿಶ್ವನಾಥ್, "ಸಾ.ರಾ.ಮಹೇಶ್ ಅವರು ಕೊಚ್ಚೆ ಗುಂಡಿ. ನಾನು ಅವರ ಬಗ್ಗೆ ಮಾತನಾಡುವುದಿಲ್ಲ" ಎಂದಿದ್ದಾರೆ.
"ಕೊಚ್ಚೆ ಗುಂಡಿಗೆ ಕಲ್ಲೆಸೆದು ಪದೇ ಪದೇ ನಾನು ಶುಭ್ರವಾದ ಬಟ್ಟೆಗಳಿಗೆ ಕೊಳೆ ಮಾಡಿಕೊಳ್ಳುವುದಿಲ್ಲ. ಯಾರ ಬಗ್ಗೆ ಏನು ಮಾತನಾಡಬೇಕು ಎಂದು ತಿಳಿದುಕೊಳ್ಳದೆಯೇ ಬಾಯಿಗೆ ಬಂದಂತೆ ಮಾತನಾಡುವವರ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ' ಎಂದು ಹೇಳಿದ್ದಾರೆ.
"ತೀರ್ಪಿನ ಪ್ರತಿ ದೊರೆತ ಬಳಿಕ ವಕೀಲರೊಂದಿಗೆ ಚರ್ಚೆ ನಡೆಸುತ್ತೇನೆ. ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇನೆ. ಸುಪ್ರೀಂಗೆ ಮನವಿ ಸಲ್ಲಿಸುವ ವಿಚಾರವಾಗಿಯೂ ಕೂಡಾ ಚಿಂತನೆ ನಡೆಸಲಾಗುತ್ತದೆ" ಎಂದಿದ್ದಾರೆ.