ಬೆಂಗಳೂರು, ಡಿ.01 (DaijiworldNews/MB) : ಸಿ.ಪಿ ಯೋಗೇಶ್ವರ್ಗೆ ಸಚಿವ ಸ್ಥಾನ ಖಚಿತವಾಗಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ದಿ. ಕೆಂಗಲ್ ಹನುಮಂತಯ್ಯನವರ ಪುಣ್ಯತಿಥಿಯ ಅಂಗವಾಗಿ ವಿಧಾನಸೌಧದಲ್ಲಿ ಪುಷ್ಪ ನಮನ ಸಲ್ಲಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯೋಗೇಶ್ವರ್ ಅವರನ್ನು ಸಚಿವರನ್ನಾಗಿ ಮಾಡುವುದು ಖಚಿತ ಎಂದು ಹೇಳಿದರು.
''ಯೋಗೇಶ್ವರ್ ಪರ ಬ್ಯಾಟಿಂಗ್ ಮಾಡುವವರು ಸಚಿವ ಸ್ಥಾನ ತ್ಯಾಗ ಮಾಡಲಿ'' ಎಂಬ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಯಾಗಿರುವ ಶಾಸಕ ರೇಣುಕಾಚಾರ್ಯರ ಹೇಳಿಕೆಗೆ ಪ್ರತಿಕ್ರಿಯಿಸುವ ಸಂದರ್ಭ ಮುಖ್ಯಮಂತ್ರಿ ಈ ಹೇಳಿಕೆ ನೀಡಿದ್ದಾರೆ.
ಈ ಹಿಂದೆ ಉಡುಪಿಯಲ್ಲಿ ಯೋಗೀಶ್ವರ್ ಪರ ಬ್ಯಾಟಿಂಗ್ ಮಾಡಿದ್ದ ಡಿಸಿಎಂ ಅಶ್ವತ್ಥ ನಾರಾಯಣ್, "ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಕೊಡಬೇಕು ಎನ್ನುವ ಒತ್ತಾಯ ಇದೆ. ಬಹಳಷ್ಟು ಜವಾಬ್ದಾರಿ ಹೊತ್ತು ಕಾರ್ಯನಿರ್ವಹಿಸಿದ್ದಾರೆ. ಅವರಿಗೆ ಸಚಿವ ಸ್ಥಾನ ಸಿಗಲಿ ಎನ್ನುವುದು ನಮ್ಮ ಅಭಿಪ್ರಾಯವಾಗಿದೆ" ಎಂದು ಹೇಳಿದ್ದರು.