ಬೆಂಗಳೂರು, ಡಿ.01 (DaijiworldNews/MB) : "ಕಾಂಗ್ರೆಸ್ ಮಹಾತ್ಮ ಗಾಂಧಿ ಮತ್ತು ಸ್ವಾಮಿ ವಿವೇಕಾನಂದರು ಆಚರಿಸಿದ, ಪ್ರಚಾರ ಮಾಡಿದ ಹಿಂದುತ್ವ ಸಿದ್ಧಾಂತವನ್ನು ದೃಢವಾಗಿ ನಂಬುತ್ತದೆ. ನಾವು ಎಲ್ಲರನ್ನೂ ಒಳಗೊಂಡ ಹಿಂದುತ್ವವನ್ನು ನಂಬುತ್ತೇವೆ" ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಸೋಮವಾರ ಪಕ್ಷದ ಹಿರಿಯ ನಾಯಕರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, "ಮಹಾತ್ಮ ಗಾಂಧಿ ಮತ್ತು ಸ್ವಾಮಿ ವಿವೇಕಾನಂದರು ಎಲ್ಲರನ್ನೂ ಒಳಗೊಂಡ ಹಿಂದುತ್ವವನ್ನು ಪ್ರಚಾರ ಮಾಡಿದರು. ಆದರೆ ಬಿಜೆಪಿ ವಿಭಜಿತ ಹಿಂದುತ್ವವನ್ನು ಅನುಸರಿಸುತ್ತಿದೆ'' ಎಂದು ಟೀಕಿಸಿದರು.
ಅಂತರ್ ಧರ್ಮೀಯ ವಿವಾಹ ನಿಷೇಧಿಸುವ ಬಗ್ಗೆ ಬಿಜೆಪಿ ಪ್ರಸ್ತಾಪಿಸಿರುವ ಕಠಿಣ ಕಾನೂನಿನ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಹಿಂದೂ ಮತ್ತು ಹಿಂದೂ ಧರ್ಮ ಯಾರೊಬ್ಬರ ಆಸ್ತಿಯಲ್ಲ. ಇವು ಭಾರತದ ನೀತಿಗಳು ಮತ್ತು ಎಲ್ಲರಿಗೂ ಸೇರಿವೆ" ಎಂದು ಹೇಳಿದರು.
"ಸಂವಿಧಾನವನ್ನು ರಕ್ಷಿಸುವುದು ನಮ್ಮ ಬದ್ಧತೆ ಮತ್ತು ನಮ್ಮ ನಿಲುವು" ಎಂದು ಅವರು ಪ್ರತಿಪಾದಿಸಿದರು.
"ನಾವು ಕಾಂಗ್ರೆಸ್ ಅನ್ನು ಕಾರ್ಯಕರ್ತರನ್ನು ಆಧಾರಿಸಿರುವ ಪಕ್ಷವನ್ನಾಗಿ ಮಾಡಲು ಯೋಜಿಸುತ್ತಿದ್ದೇವೆ. ಆದ್ದರಿಂದ ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿಯೇ ಬೂತ್ ಮತ್ತು ಪಂಚಾಯತ್ ಮಟ್ಟದ ಸಮಿತಿಗಳನ್ನು ರಚಿಸಲು ನಾವು ಯೋಜಿಸಿದ್ದೇವೆ" ಎಂದು ತಿಳಿಸಿದರು.
''ಮುಂದಿನ ತಿಂಗಳು ನಡೆಯಲಿರುವ ಚುನಾವಣೆಯಲ್ಲಿ ಬಹುಪಾಲು ಜಿಲ್ಲಾ ಪಂಚಾಯತ್ಗಳನ್ನು ಗೆಲ್ಲುವ ಪ್ರಬಲ ಪ್ರಯತ್ನದಲ್ಲಿ ಒಂಬತ್ತು ತಂಡಗಳನ್ನು ರಚಿಸಲಾಗುವುದು. ನಮ್ಮ ಎಲ್ಲ ನಾಯಕರು ಈ ತಂಡಗಳಲ್ಲಿ ಮುತುವರ್ಜಿ ವಹಿಸಲಿದ್ದಾರೆ'' ಎಂದು ಹೇಳಿದರು.
ಕರ್ನಾಟಕ ರಾಜ್ಯ ಚುನಾವಣಾ ಆಯೋಗ ರಾಜ್ಯದ 5,762 ಗ್ರಾಮ ಪಂಚಾಯಿತಿಗಳಿಗೆ ಎರಡು ಹಂತಗಳಲ್ಲಿ ಡಿಸೆಂಬರ್ 22 ಮತ್ತು 27 ರಂದು ಚುನಾವಣೆ ಘೋಷಿಸಿದ್ದು ಸೋಮವಾರದಿಂದಲ್ಲೇ ನೀತಿ ಸಂಹಿತೆ ಜಾರಿಯಾಗಿದೆ.