ನವದೆಹಲಿ,ಡಿ. 01 (DaijiworldNews/HR): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಯನ್ನು ವಿರೋಧಿಸಿ ಕಳೆದ ಐದು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಕೇಂದ್ರ ಸರ್ಕಾರ ಚರ್ಚೆಗೆ ಆಹ್ವಾನಿಸಿದ್ದು, ಮಾತುಕತೆಗೆ ಕರೆಯುವುದಾದರೆ ದೇಶದಲ್ಲಿರುವ ಎಲ್ಲ ರೈತ ಸಂಘಟನೆಗಳನ್ನು ಆಹ್ವಾನಿಸಬೇಕು, ಇಲ್ಲವಾದಲ್ಲಿ ನಾವು ಚರ್ಚೆಗೆ ಬರುವುದಿಲ್ಲ ಎಂದು 'ಪಂಜಾಬ್ ರೈತ ಸಂಘರ್ಷ ಸಮಿತಿಯು ಕೇಂದ್ರ ಸರ್ಕಾರಕ್ಕೆ ಪ್ರತಿಕ್ರಿಯಿಸಿದೆ.
ಈ ಕುರಿತು ಮಾತನಾಡಿದ ಪಂಜಾಬ್ ರೈತ ಸಂಘರ್ಷ ಸಮಿತಿಯ ಜಂಟಿ ಕಾರ್ಯದರ್ಶಿ ಸುಖ್ವಿಂದರ್ ಎಸ್ ಸಭರನ್ ಅವರು, " ನಮ್ಮ ದೇಶದಲ್ಲಿ 500ಕ್ಕೂ ಅಧಿಕ ರೈತ ಸಂಘಟನೆಗಳಿವೆ. ಆದರೆ ಕೇಂದ್ರ ಸರ್ಕಾರ ಕೇವಲ 32 ಸಂಘಟನೆಗಳನ್ನು ಮಾತುಕತೆಗೆ ಕರೆದಿದೆ. ಇದು ಸರಿಯಾದ ತೀರ್ಮಾನವಲ್ಲ ದೇಶದಲ್ಲಿರುವ ಎಲ್ಲ ಸಂಘಟನೆಗಳನ್ನು ಮಾತುಕತೆಗೆ ಆಹ್ವಾನಿಸದಿದ್ದರೆ ನಾವೂ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ" ಎಂದರು.
ಇನ್ನು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ರೈತರು ಪ್ರತಿಭಟನೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದು, ಚಳಿ ಮತ್ತು ಕೊರೊನಾವನ್ನು ಗಮನದಲ್ಲಿಟ್ಟುಕೊಂಡು ಡಿಸೆಂಬರ್ 3ಕ್ಕಿಂತಲೂ ಮೊದಲೇ ನಾವು ರೈತ ಸಂಘಗಳ ಮುಖಂಡರನ್ನು ಚರ್ಚೆಗೆ ಆಹ್ವಾನಿಸಿದ್ದೇವೆ ಎಂದು ಹೇಳಿದ್ದರು.