ಬೆಂಗಳೂರು, ಡಿ.01 (DaijiworldNews/PY): "ಜೆಡಿಎಸ್ ಪಕ್ಷವನ್ನು ನಾನು ಯಾವುದೇ ಕಾರಣಕ್ಕೂ ತೊರೆಯುವುದಿಲ್ಲ" ಎಂದು ಮಾಜಿ ಶಾಸಕ ವೈಎಸ್ವಿ ದತ್ತಾ ಹೇಳಿದ್ದಾರೆ.
"ನಾನು ಆಪ್ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ ಎಂದಿರುವ ಸುದ್ದಿ ಸುಳ್ಳು. ಬೇರೆ ಪಕ್ಷಕ್ಕೆ ಹೋಗುವ ಬಗ್ಗೆ ನಾನು ಯೋಚಿಸಿಲ್ಲ. ಈ ವಿಚಾರವಾಗಿ ಕೆಲವು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಸುಳ್ಳು" ಎಂದಿದ್ದಾರೆ.
"ಈ ವಿಚಾರವಾಗಿ ಏಕೆ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡುತ್ತಿದ್ದಾರೆ ಎಂದು ತಿಳಿದಿಲ್ಲ. ನನ್ನನ್ನು ಆಪ್ ಪಕ್ಷದವರು ಕರೆದಾಗ ನಾನು ಜೆಡಿಎಸ್ನಲ್ಲೇ ಇರುತ್ತೇನೆ ಎಂದು ಹೇಳಿದ್ದೆ. ಈಗಲೂ ಅದನ್ನೇ ಹೇಳುತ್ತೇನೆ. ನಾನು ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷವನ್ನು ತೊರೆಯುವುದಿಲ್ಲ" ಎಂದು ತಿಳಿಸಿದ್ದಾರೆ.
ವೈಎಸ್ವಿ ದತ್ತಾ ಅವರು 2013ರಲ್ಲಿ ಚಿಕ್ಕಮಗಳೂರಿನ ಕಡೂರು ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿದ್ದು, ನಂತರ 2018ರ ಚುನಾವಣೆಯಲ್ಲಿ ಸೋಲು ಕಂಡಿದ್ದರು. ದತ್ತಾ ಅವರನ್ನು ಪ್ರಸ್ತುತ ಜೆಡಿಎಸ್ ತನ್ನ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದೆ.