ಕೋಲ್ಕತ್ತ,ಡಿ. 01 (DaijiworldNews/HR): ಪಶ್ಚಿಮ ಬಂಗಾಳದ ಬಿಜೆಪಿಯ ಅನೇಕ ನಾಯಕರಿಗೆ ಇಲ್ಲಿನ ಸಾಂಸ್ಕೃತಿಕ ಪರಂಪರೆಯ ಬಗ್ಗೆ ತಿಳಿದಿಲ್ಲ, ಹಾಗಾಗಿ ಹಿಂದಿ ಸಿನಿಮಾ 'ಶೋಲೆ'ಯ ವಿಲನ್ 'ಗಬ್ಬರ್ ಸಿಂಗ್' ರೀತಿಯಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಹೇಳಿದೆ.
ಈ ಕುರಿತು ಮಾತನಾಡಿರುವ ಮಾಹಿತಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಇಂದ್ರನೀಲ್ ಸೇನ್ ಅವರು, "ರಾಜ್ಯದ ಬಿಜೆಪಿಯ ನಾಯಕರಿಗೆ ಬಂಗಾಳಿ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದಂತಹ ಗೀತರಚನೆಕಾರರು ಮತ್ತು ಗಾಯಕರ ಬಗ್ಗೆ ತಿಳಿದಿಲ್ಲ. ಅವರೆಲ್ಲ ರಾಜ್ಯದ ಬಗ್ಗೆ ಅವರು ತೋರಿಸುತ್ತಿರುವ ಪ್ರೀತಿ ವಿಧಾನಸಭೆ ಚುನಾವಣೆಗಾಗಿ ಮಾತ್ರವಲ್ಲದೆ ಅದು ನಿಜವಾದ ಪ್ರೀತಿಯಲ್ಲ ಎಂದರು".
ಇನ್ನು "ಖ್ಯಾತ ಹಿನ್ನೆಲೆ ಗಾಯಕ ಮನ್ನಾ ಡೇ ಅವರ ಜಯಂತಿಯಂದು ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಪ್ರಮುಖ ಬಿಜೆಪಿ ನಾಯಕರೊಬ್ಬರು ಕಿಶೋರ್ ಕುಮಾರ್ ಅವರ ಹಾಡನ್ನು ಟ್ವೀಟ್ ಮಾಡಿದ್ದಾರೆ, ಕಿಶೋರ್ ಕುಮಾರ್ ಅವರ ಜನ್ಮದಿನದಂದು ಮೊಹಮ್ಮದ್ ರಫಿ ಅವರ ಹಾಡು ಹಂಚಿಕೊಂಡಿದ್ದರು. ಇದು ಬಂಗಾಳವನ್ನು ಹೆಮ್ಮೆಪಡುವಂತೆ ಮಾಡಿದವರ ಕುರಿತಾದ ಬಿಜೆಪಿ ನಾಯಕರ ಜ್ಞಾನದ ಮಟ್ಟವನ್ನು ಸೂಚಿಸುತ್ತದೆ" ಎಂದು ಹೇಳಿದ್ದಾರೆ.