ವಾರಾಣಸಿ, ಡಿ.01 (DaijiworldNews/MB) : ತಮ್ಮ ಸರ್ಕಾರ ಹೊಸ ಕಾನೂನುಗಳು ರೈತರಿಗೆ ಅಧಿಕಾರ, ಹೊಸ ಆಯ್ಕೆ ಹಾಗೂ ಕಾನೂನು ರಕ್ಷಣೆ ನೀಡುತ್ತದೆ. ಮುಂದಿನ ದಿನಗಳಲ್ಲಿ ಕೃಷಿ ಕಾಯ್ದೆಗಳ ಲಾಭ ತಿಳಿಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ರಾಷ್ಟ್ರೀಯ ಹೆದ್ದಾರಿ 19 ರ ಆರು ಪಥಗಳ ಅಗಲವಾದ ಹಂಡಿಯಾ (ಪ್ರಯಾಗರಾಜ್) -ರಾಜತಾಲಾಬ್ (ವಾರಣಾಸಿ) ರಸ್ತೆಗೆ ಚಾಲನೆ ನೀಡಿದ ಅವರು ಬಳಿಕ ಮಾತನಾಡಿ, ಒಬ್ಬ ರೈತನು ತನ್ನ ಉತ್ಪನ್ನಗಳನ್ನು ಉತ್ತಮ ಬೆಲೆ ಮತ್ತು ಸೌಲಭ್ಯಗಳನ್ನು ನೀಡುವವರಿಗೆ ನೇರವಾಗಿ ತನ್ನ ಬೆಲೆಯನ್ನು ಮಾರಾಟ ಮಾಡುವ ಮೂಲಕ ಆತನಿಗೆ ಬೇಕಾದ ಲಾಭ ಪಡೆಯಬಾರದೇ? ರೈತ ತನ್ನ ಬೆಲೆಯನ್ನು ತಾನು ಮಾರಾಟ ಮಾಡುವ ಸ್ವಾತಂತ್ರ್ಯವನ್ನು ಪಡೆಯಬಾರದೇ? ಎಂದು ಪ್ರಶ್ನಿಸಿದರು.
ಪ್ರಸ್ತುತ ಕಾನೂನನ್ನು ಸಣ್ಣ ರೈತರ ಹಿತದೃಷ್ಟಿಯಿಂದ ತರಲಾಗಿದೆ. ಹೊಸ ಕೃಷಿ ಕಾನೂನು ಹಳೆಯ ವ್ಯವಸ್ಥೆಯ ಪ್ರಕಾರ ಉತ್ಪನ್ನಗಳನ್ನು ಮಾರಾಟ ಮಾಡಲು ಇಚ್ಛಿಸುವವರನ್ನು ತಡೆಯುವುದಿಲ್ಲ ಎಂದು ಹೇಳಿದರು.
ಇನ್ನು ಈ ಹಿಂದೆ ಸರ್ಕಾರದ ನಿರ್ಧಾರಗಳನ್ನು ಯಾರಾದರೂ ಇಷ್ಟಪಡದಿದ್ದರೆ, ಅದನ್ನು ವಿರೋಧ ಮಾಡುತ್ತಿದ್ದರು. ಆದರೆ ಈಗ ಹೊಸ ರೀತಿ ಆರಂಭವಾಗಿದೆ. ನಿರ್ಧಾರ ಸರಿಯಾಗಿದ್ದರೂ ಕೂಡಾ ಈ ಕಾಯ್ದೆ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದರು.
ಇನ್ನು ಪ್ರಧಾನಿ ನರೇಂದ್ರ ಮೋದಿ ವಾರಾಣಾಸಿಯ ರಾಜ್ ಘಾಟ್ನಲ್ಲಿ ದೇವ್ ದೀಪಾವಳಿ ಮಹೋತ್ಸವನ್ನು ಉದ್ಘಾಟಿಸಿ, ಮೊದಲ ದೀಪವನ್ನು ಹಚ್ಚಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾರ್ತಿಕಾ ಮಾಸದ ಹುಣ್ಣಿಮೆ ಆಚರಣೆ ಅಂಗವಾಗಿ ಗಂಗಾ ನದಿಯ ದಡದಲ್ಲಿ 15 ಲಕ್ಷ ದೀಪಗಳನ್ನು ಬೆಳಗಲಾಯಿತು. ಸಾಂಪ್ರದಾಯಿಕ ನೃತ್ಯಗಾರರು ನೃತ್ಯ ಪ್ರದರ್ಶಿಸಿದರು.