ನವದೆಹಲಿ, ಡಿ.01 (DaijiworldNews/MB) : ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ದ ಕಳೆದ ಐದು ದಿನಗಳಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಕೇಂದ್ರ ಸರ್ಕಾರ ಮಂಗಳವಾರ ಚರ್ಚೆಗೆ ಆಹ್ವಾನಿಸಿದೆ. ನಿಗದಿತ ದಿನಕ್ಕಿಂತಲೂ ಎರಡು ದಿನಕ್ಕೂ ಮುನ್ನವೇ ಸರ್ಕಾರ ರೈತರನ್ನು ಚರ್ಚೆಗೆ ಆಹ್ವಾನಿಸಿದೆ.
ಈ ಮೊದಲು ಸರ್ಕಾರವು ರೈತರನ್ನು ರವಿವಾರ ಚರ್ಚೆಗೆ ಕರೆದಿತ್ತು. ಆದರೆ ರೈತರು ಸರ್ಕಾರ ನಿಗದಿಪಡಿಸಿದ ಬುರಾಡಿ ಮೈದಾನಕ್ಕೆ ತೆರಳಿ ಅಲ್ಲಿ ಪ್ರತಿಭಟನೆ ಮಾಡಬೇಕು ಎಂಬ ಷರತ್ತು ವಿಧಿಸಿತ್ತು. ಈ ಮೊದಲೇ ಷರತ್ತಿನ ಮೇರೆಗೆ ಯಾವುದೇ ಮಾತುಕತೆಗೆ ಮುಂದಾಗುವುದಿಲ್ಲ ಎಂದು ಹೇಳಿದ್ದ ರೈತರು ಕೇಂದ್ರ ಸರ್ಕಾರದ ಈ ಷರತ್ತು ಬದ್ದ ಆಹ್ವಾನವನ್ನು ನಿರಾಕರಿಸಿ ಸಿಂಗು ಮತ್ತು ಟಿಕ್ರಿ ಗಡಿಗಳಲ್ಲಿ ಪ್ರತಿಭಟನೆ ಮುಂದುವರಿಸಿದ್ದರು.
ಆದರೆ ಈಗ ರೈತರ ಪ್ರತಿಭಟನೆಗೆ ಮಣಿದಿರುವ ಕೇಂದ್ರ ಸರ್ಕಾರ ರೈತರನ್ನು ಮಾತುಕತೆಗೆ ಕರೆದಿದೆ. ಈ ಬಗ್ಗೆ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿರುವ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ''ಪ್ರಸ್ತುತ ಇರುವ ಚಳಿ ಹಾಗೂ ಕೊರೊನಾ ಸೋಂಕು ಕಾರಣದಿಂದಾಗಿ ನಾವು ಡಿಸೆಂಬರ್ 3ಕ್ಕಿಂತಲೂ ಮೊದಲೇ ರೈತ ಸಂಘಟನೆ ಮುಖಂಡರನ್ನು ಚರ್ಚೆಗೆ ಆಹ್ವಾನಿಸಿದ್ದೇವೆ'' ಎಂದು ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ್ದ ರೈತರು, ''ನಾವು ನಿರ್ಣಾಯಕ ಯುದ್ದಕ್ಕೆಂದು ದೆಹಲಿಗೆ ಬಂದಿದ್ದು ಪ್ರಧಾನಿ ಮೋದಿ ನಮ್ಮ 'ಮನ್ ಕಿ ಬಾತ್ (ಮನದ ಮಾತು)' ಕೇಳಬೇಕು'' ಎಂದು ಆಗ್ರಹಿಸಿದ್ದರು.
ಇನ್ನು ರವಿವಾರ ಪ್ರಧಾನಿ ಮೋದಿಯವರ ಮಾಸಿಕ ಕಾರ್ಯಕ್ರಮ ಮನ್ ಕಿ ಬಾತ್ನಲ್ಲಿ ರೈತರು ವಿರೋಧಿಸುತ್ತಿರುವ ಮೂರು ಕೃಷಿ ಕಾಯ್ದೆಗಳನ್ನು ಸಮರ್ಥನೆ ಮಾಡಿಕೊಂಡಿದ್ದರು. ''ಶ್ರಮಪಟ್ಟು ದುಡಿಯುವ ಭಾರತದ ರೈತರ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ. ಈ ಹೊಸ ಕಾಯ್ದೆಗಳ ಮುಖೇನ ಮಾಡಲಾಗಿರುವ ಸುಧಾರಣೆಗಳು ರೈತರ ಸಂಕೋಲೆಗಳನ್ನು ಮುರಿದಿದೆ ಮಾತ್ರವಲ್ಲದೆ ಅವರಿಗೆ ಹೊಸ ಹಕ್ಕುಗಳು ಮತ್ತು ಅವಕಾಶಗಳನ್ನು ನೀಡಿದೆ. ಈ ಹೊಸ ಸುಧಾರಣೆಗಳ ಬಗ್ಗೆ ತಮ್ಮ ಹತ್ತಿರದ ಪ್ರದೇಶಗಳಲ್ಲಿನ ರೈತರಿಗೆ ಕೃಷಿ ವಿದ್ಯಾರ್ಥಿಗಳು ತಿಳಿಸಿಬೇಕೆಂದು ನಾನು ಎಲ್ಲಾ ಕೃಷಿ ವಿದ್ಯಾರ್ಥಿಗಳಿಗೆ ಮನವಿ ಮಾಡುತ್ತೇನೆ'' ಎಂದು ಹೇಳಿದ್ದರು.