ಮಂಗಳೂರು: ನ. 30 (DaijiworldNews/SM): ಮಿನಿ ಸಮರವೆಂದೇ ಬಿಂಬಿತವಾಗಿರುವ ಗ್ರಾಮ ಪಂಚಾಯತ್ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಈಗಾಗಲೇ ಎರಡು ಹಂತದಲ್ಲು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದ್ದು, ದ.ಕ. ಜಿಲ್ಲೆಯ ಮೂರು ತಾಲೂಕುಗಳ ಗ್ರಾ.ಪಂಚಾಯತ್ ಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಉಳಿದ ನಾಲ್ಕು ತಾಲೂಕುಗಳ ಗ್ರಾ. ಪಂಚಾಯತ್ ಗಳಿಗೆ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ.
ಮಂಗಳೂರು, ಮೂಡುಬಿದಿರೆ, ಬಂಟ್ವಾಳ ತಾಲೂಕುಗಳ ಗ್ರಾಮ ಪಂಚಾಯತ್ ಗಳಿಗೆ ಮೊದಲ ಹಂತದಲ್ಲಿ ಅಂದರೆ ಡಿಸೆಂಬರ್ 22ರಂದು ಮತದಾನ ನಡೆಯಲಿದೆ. ಮಂಗಳೂರು ತಾಲೂಕಿನಲ್ಲಿ 40, ಬಂಟ್ವಾಳ ತಾಲೂಕಿನಲ್ಲಿ 56 ಹಾಗೂ ಮೂಡುಬಿದಿರೆಯಲ್ಲಿ 12 ಗ್ರಾಮ ಪಂಚಾಯತ್ ಗಳಿವೆ.
ಉಳಿದಂತೆ ಬೆಳ್ತಂಗಡಿ, ಸುಳ್ಯ, ಕಡಬ, ಪುತ್ತೂರು ತಾಲೂಕಿನ ಗ್ರಾ. ಪಂಚಾಯತ್ ಗಳಿಗೆ ಎರಡನೇ ಹಂತದಲ್ಲಿ ಅಂದರೆ, ಡಿಸೆಂಬರ್ 27ರಂದು ಚುನಾವಣೆ ನಡೆಯಲಿದೆ. ಬೆಳ್ತಂಗಡಿಯಲ್ಲಿ 46, ಪುತ್ತೂರಿನಲ್ಲಿ 22, ಸುಳ್ಯದಲ್ಲಿ 25 ಹಾಗೂ ಕಡಬದಲ್ಲಿ 21 ಗ್ರಾಮ ಪಂಚಾಯತ್ ಗಳಿವೆ.
ಇನ್ನು ಉಡುಪಿ ಜಿಲ್ಲೆಯ ಉಡುಪಿ, ಬ್ರಹ್ಮಾವರ, ಬೈಂದೂರು, ಹೆಬ್ರಿ ತಾಲೂಕುಗಳ ಗ್ರಾ.ಪಂಚಾಯತ್ ಗಳಿಗೆ ಡಿಸೆಂಬರ್ 22ರಂದು ಮತದಾನ ನಡೆಯಲಿದೆ. ಇಳಿದಂತೆ ಕುಂದಾಪುರ, ಕಾರ್ಕಳ, ಕಾಪು ತಾಲೂಕುಗಳ ಗ್ರಾ.ಪಂಚಾಯತ್ ಗಳಿಗೆ ಡಿಸೆಂಬರ್ 27ರಂದು ಮತದಾನ ನಡೆಯಲಿದೆ.