ವಿಜಯವಾಡ, ನ.30 (DaijiworldNews/PY): ವಿಧಾನಸಭೆಯ ಚಳಿಗಾಲ ಅಧಿವೇಶನದ ಮೊದಲ ದಿನವೇ ಕಲಾಪಕ್ಕೆ ಅಡ್ಡಿಪಡಿಸಿ, ಗದ್ದಲ ಸೃಷ್ಠಿ ಮಾಡಿರುವ ಹಿನ್ನೆಲೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧಪಕ್ಷದ ನಾಯಕ ಎನ್ ಚಂದ್ರಬಾಬು ನಾಯ್ಡು ಅವರನ್ನು ಸದನದಿಂದ ಒಂದ ದಿನದ ಮಟ್ಟಿಗೆ ಅಮಾನತುಗೊಳಿಸಲಾಗಿದೆ.
ನಿವಾರ್ ಚಂಡಮಾರುತದಿಂದ ಉಂಟಾದ ಹಾನಿ ಹಾಗೂ ಪರಿಹಾರದ ವಿಚಾರವನ್ನು ಟಿಡಿಪಿ ಸದಸ್ಯೆ ನಿಮ್ಮಲಾ ರಮಾನೈದು ಅವರು ಪ್ರಸ್ತಾಪಿಸುತ್ತಿದ್ದು, ಇದಕ್ಕೆ ಉತ್ತರಿಸಿದ ಸಿಎಂ ವೈ.ಎನ್.ಜಗನ್ ಮೋಹನ್ ರೆಡ್ಡಿ, "ವರದಿಯನ್ನು ಡಿ.15ರ ಒಳಗೆ ನೀಡುವಂತೆ ತಿಳಿಸಿದ್ದಾರೆ. ವರದಿ ಬಂದ ಬಳಿಕ ಸಬ್ಸಿಡಿ ರೂಪದಲ್ಲಿ ಡಿ.31ರ ಒಳಗೆ ಪರಿಹಾರವನ್ನು ಪಾವತಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ" ಎಂದು ಹೇಳಿದ್ದಾರೆ.
ಈ ಸಂದರ್ಭ ತನಗೆ ಮೈಕ್ ನೀಡುವಂತೆ ಚಂದ್ರಬಾಬು ನಾಯ್ಡು ಅವರು ಒತ್ತಾಯಿಸಿದ್ದಾರೆ. ಆದರೆ, ಆ ವೇಳೆ ರಮಾನೈದು ಅವರು ಮಾತನಾಡುತ್ತಿರು ಕಾರಣ ಇದನ್ನು ನಿರಾಕರಿಸಲಾಯಿತು. ಈ ಹಿನ್ನೆಲೆ ಚಂದ್ರಬಾಬು ನಾಯ್ಡು ಅವರಿಗೆ ಮೈಕ್ ನೀಡಬೇಕು ಎಂದು ಟಿಡಿಪಿ ಸದಸ್ಯರು ಒತ್ತಾಯಿಸಿದ್ದು, ಈ ಸಂದರ್ಭ ಚಂದ್ರಬಾಬು ನಾಯ್ಡು ಅವರು ಸ್ಪೀಕರ್ ಕುರ್ಚಿಯ ಮುಂದೆ ನೆಲದ ಮೇಲೆ ಕುಳಿತು ಪ್ರತಿಭಟಿಸಿದ್ದಾರೆ.
ಈ ಕಾರಣದಿಂದ ಆಕ್ರೋಶಗೊಂಡ ಸಿಎಂ ಜಗನ್ ಮೋಹನ್ ರೆಡ್ಡಿ ಅವರು, "ನಿಮ್ಮ ಪಕ್ಷದ ಸದಸ್ಯರೊಬ್ಬರು ಮಾತನಾಡುತ್ತಿರುವ ಸಂದರ್ಭನಡುವೆ ಮಾತನಾಡುವುದು ಎಷ್ಟು ಸರಿ?" ಎಂದು ಕೇಳಿದ್ದಾರೆ.
ಈ ವೇಳೆ ಚಂದ್ರಬಾಬು ನಾಯ್ಡು ಅವರಿಗೆ ಸ್ಪೀಕರ್ ಮನವಿ ಮಾಡಿದ್ದು, ಪ್ರತಿಭಟನೆ ಕೈಬಿಟ್ಟು ನಿಮ್ಮ ಜಾಗದಲ್ಲಿ ಕುಳಿತುಕೊಳ್ಳುವಂತೆ ಹೇಳಿದ್ದಾರೆ. ಆದರೂ ಅವರು ಅವರ ಮನವಿಯನ್ನು ಕೇಳಲಿಲ್ಲ. ಈ ಕಾರಣದಿಂದ ಚಂದ್ರಬಾಬು ನಾಯ್ಡು ಸೇರಿದಂತೆ 12 ಶಾಸಕರನ್ನು ಒಂದು ದಿನದ ಮಟ್ಟಿಗೆ ಅಮಾನತು ಮಾಡಿದ್ದಾರೆ.