ಹಾವೇರಿ, ನ.30 (DaijiworldNews/PY): "ಸಚಿವ ಸಂಪುಟ ವಿಸ್ತರಣೆಗೆ ಚುನಾವಣಾ ನೀತಿ ಸಂಹಿತೆ ಅನ್ವಯವಾಗುವುದಿಲ್ಲ" ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಹಾವೇರಿಯಲ್ಲಿ ಗ್ರಾಮ ಪಂಚಾಯತ್ ಚುನಾವಣೆ ದಿನಾಂಕ ಘೋಷಣೆಯಾದ ಹಿನ್ನೆಲೆ ಮಾತನಾಡಿದ ಅವರು, "ಸಚಿವ ಸ್ಥಾನದ ಆಕಾಂಕ್ಷಿಗಳು ಚುನಾವಣೆ ಘೋಷಣೆ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆ ನಿರಾಶೆಗೊಳ್ಳುವುದು ಬೇಡ. ಸಿಎಂ ಬಿಎಸ್ವೈ ಅವರು ಯಾವಾಗ ಬೇಕಾದರೂ ಸಚಿವ ಸಂಪುಟ ವಿಸ್ತರಣೆ ಮಾಡಬಹುದಾಗಿದೆ. ಹೈಕಮಾಂಡ್ನೊಂದಿಗೆ ಚರ್ಚೆ ನಡೆಸಿ ಸಂಪುಟ ವಿಸ್ತರಣೆ ಮಾಡಲಾಗುತ್ತದೆ" ಎಂದರು.
"ಈಗಾಗಲೇ ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಘೋಷಣೆ ಮಾಡಿದ್ದು, ಎರಡು ಹಂತಗಳಲ್ಲಿ ಪ್ರಚಾರ ಮಾಡಲು ತಂಡ ರಚಿಸಿದ್ದೇವೆ" ಎಂದು ಹೆಳಿದರು.
ಮೂಲ ಬಿಜೆಪಿಗರು ಹಾಗೂ ವಲಸಿಗರ ಸಭೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, "ಒಟ್ಟಿಗೆ ಊಟಕ್ಕೆ ಹೋಗುವುದು ತಪ್ಪಾ?. ಗೆಳೆಯರು ಜೊತೆಯಾಗಿ ಊಟ ಮಾಡಿದರೆ ಅದನ್ನು ತಪ್ಪು ಎಂದು ಹೇಳುವುದಕ್ಕೆ ಆಗುತ್ತಾ?" ಎಂದು ಕೇಳಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆತ್ಮಹತ್ಯೆ ಯತ್ನ ವಿಚಾರದ ಬಗ್ಗೆ ಮಾತನಾಡಿದ ಅವರು, "ಸಿಡಿ ಬಗ್ಗೆ ಈಗಾಗಲೇ ನಾನು ಹೇಳಿದ್ದು, ಇದಕ್ಕೆ ಡಿ.ಕೆ.ಶಿವಕುಮಾರ್ ಅವರು ಉತ್ತರಿಸಿದ್ದಾರೆ. ಮತ್ತೆ ಈ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದರು.