ಚಿಕ್ಕಮಗಳೂರು, ನ. 30 (DaijiworldNews/MB) : ''ಸುಳ್ಳೇ ಕಾಂಗ್ರೆಸ್ನ ಮನೆ ದೇವರು. ಸಿದ್ದರಾಮಯ್ಯ ಕಾಂಗ್ರೆಸ್ ಬಂದ ಬಳಿಕ ಅದರ ಪಾಠವನ್ನೇ ಕಲಿಯುತ್ತಿದ್ದಾರೆ. ಅವರು ಕೂಡಾ ಸುಳ್ಳನ್ನು ತಮ್ಮ ಮನೆ ದೇವರನ್ನಾಗಿ ಮಾಡಿಕೊಂಡಿದ್ದಾರೆ'' ಎಂದು ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ. ರವಿ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ದ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿ, ''ಮೋದಿ ಹಾಗೂ ಬಿಜೆಪಿಯ ವಿರುದ್ದ ಕಾಂಗ್ರೆಸ್ ಸುಳ್ಳನ್ನು ಹೇಳಿಕೊಂಡೇ ಪ್ರಚಾರ ನಡೆಸುತ್ತಿದೆ. ಕಾಂಗ್ರೆಸ್ನವರಿಗೆ ಸತ್ಯವನ್ನು ನಂಬುವ ಗುಣವೇ ಇಲ್ಲ. ಹಾಗಾಗಿ ಎಲ್ಲಾ ಸತ್ಯವೂ ಅವರಿಗೆ ಸುಳ್ಳಾಗಿ ಕಾಣುತ್ತದೆ'' ಎಂದು ಹೇಳಿದರು.
''ಈಗ ಕಾಂಗ್ರೆಸ್ ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಲಿದೆ. ಈ ಹಿಂದೆ ಸಿಎಎ ವಿರುದ್ದ ಮುಸ್ಲಿಮರಿಗೆ ಸುಳ್ಳು ಹೇಳಿ ಅವರಲ್ಲಿ ಭೀತಿ ಹುಟ್ಟಿಸಿ, ಅವರು ಬೀದಿಗಿಳಿದು ಪ್ರತಿಭಟನೆ ನಡೆಸುವಂತೆ ಮಾಡಿದ್ದರು. ಅವರಿಗೆ ಸುಳ್ಳೇ ದೇವರು'' ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.
ಇನ್ನು ನಟ ರಜನೀಕಾಂತ್ ರಾಜಕೀಯ ಪ್ರವೇಶಮಾಡುವ ವಿಚಾರದ ಬಗ್ಗೆ ಮಾತನಾಡಿದ ಅವರು, ''ಸುಮಾರು ಹತ್ತು ವರ್ಷಗಳಿಂದ ರಜನೀಕಾಂತ್ ರಾಜಕೀಯಕ್ಕೆ ಪ್ರವೇಶ ಮಾಡುತ್ತಾರೆ ಎಂದು ಹೇಳಲಾಗುತ್ತಲ್ಲೇ ಇದೆ. ಅವರು ಆ ಬಗ್ಗೆ ನಿರ್ಣಯ ಮಾಡದೆಯೇ ನಾವು ಅದಕ್ಕೆ ಪ್ರತಿಕ್ರಿಯೆ ನೀಡುವುದು ಸರಿಯಾದ ವಿಚಾರವಲ್ಲ. ಅವರ ಅಂತಿಮ ನಿರ್ಧಾರ ತಿಳಿಸಿದ ಬಳಿಕ ನಾವು ಆ ಬಗ್ಗೆ ಪ್ರತಿಕ್ರಿಯೆ ನೀಡುತ್ತೇವೆ'' ಎಂದರು.