ಬೆಳಗಾವಿ, ನ.30 (DaijiworldNews/PY): "ಶಾಸಕ ಸ್ಥಾನ ತ್ಯಾಗ ಮಾಡಿ ಬಿಜೆಪಿಗೆ ಬಂದಿರುವ ಎಲ್ಲಾ ಮಂದಿಗೂ ಸಚಿವ ಸ್ಥಾನ ನೀಡಬೇಕು" ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಸೋಮವಾರ ಪರ್ತಕರ್ತರೊಂದಿಗೆ ಮಾತನಾಡಿದ ಅವರು, "ತಮ್ಮ ಶಾಸಕ ಸ್ಥಾನವನ್ನು ತ್ಯಾಗ ಮಾಡಿ ಬಿಜೆಪಿ ಬಂದ ಎಲ್ಲಾ 17 ಮಂದಿಗೂ ಸಚಿವ ಸ್ಥಾನ ನೀಡಬೇಕು. ಅಲ್ಲದೇ, ಸರ್ಕಾರದ ರಚನೆಗೆ ಶ್ರಮಿಸಿದ ಸಿ.ಪಿ.ಯೋಗೀಶ್ವರ್ ಹಾಗೂ ಮುಂತಾದವರನ್ನು ಕೂಡಾ ಪರಿಗಣಿಸಬೇಕು" ಎಂದರು.
ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಸಚಿವ ಸಂಪುಟ ವಿಸ್ತರಣೆ ಆಗಬೇಕು ಎನ್ನುವುದು ನಮ್ಮೆಲ್ಲರ ಆಶಯ. ಆದರೆ, ಗ್ರಾಮ ಪಂಚಾಯತ್ ಚುನಾವಣೆ ಘೋಷಣೆ ಆದ ಹಿನ್ನೆಲೆ ನೀತಿ ಸಂಹಿತೆ ಇರುವ ಕಾರಣ ಸಚಿವ ಸಂಪುಟ ಒಂದು ತಿಂಗಳು ಮುಂದೂಡಿಕೆ ಆಗಲಿದೆ" ಎಂದು ತಿಳಿಸಿದರು.
ಸಿಎಂ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ತ್ಯಾಗ ಮಾಡುವ ಸಂದರ್ಭ ಬಂದಲ್ಲಿ ನಾನೇ ತ್ಯಾಗ ಮಾಡುತ್ತೇನೆ. ಅಷ್ಟಕ್ಕೂ ಇದನ್ನು ಅವರು ನನಗೆ ಹೇಳಿದ್ದಾರೆ ಎಂದು ಏಕೆ ಭಾವಿಸಿಕೊಳ್ಳುತ್ತೀರಿ?. ಅವರ ಬೇರೆ ಅರ್ಥದಲ್ಲಿಯೂ ಕೂಡಾ ಮಾತನಾಡಿರಬಹುದು ಅಲ್ಲವೇ?" ಎಂದು ಕೇಳಿದರು.
"ಸಿ.ಪಿ ಯೋಗೀಶ್ವರ್ ಅವರಿಗೆ ಸಚಿವ ಸ್ಥಾನ ಸಿಗಬೇಕು ಎಂದು ನಾನು ಈಗಲೂ ಆಗ್ರಹಿಸುತ್ತೇನೆ. ರೇಣುಕಾಚಾರ್ಯ ಅವರು ಸೋತವರಿಗೆ ಸಚಿವ ಸ್ಥಾನ ನೀಡಬಾರದು ಎಂದು ಹೇಳಿದ್ದರು, ಈ ಬಗ್ಗೆ ಅವರ ಆಗ್ರಹವೂ ಕೂಡಾ ಸರಿಯಾಗಿದೆ. ನಮ್ಮ ಆಗ್ರಹವೂ ಸೂಕ್ತವಾಗಿದೆ" ಎಂದರು.
ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, "ಬಿಎಸ್ವೈ ಅವರು ಅಧಿಕಾರಾವಧಿಯನ್ನು ಸಂಪೂರ್ಣವಾಗಿ ಪೂರೈಸುತ್ತಾರೆ. ಮುಂಬರುವ ಚುನಾವಣೆ ಕೂಡಾ ಬಿಎಸ್ವೈ ಅವರ ನೇತೃತ್ವದಲ್ಲೇ ನಡೆಯುತ್ತದೆ" ಎಂದು ಹೇಳಿದರು.
"ಶಾಸಕರಿಗೆ ನನ್ನ ಮೇಲೆ ಪ್ರೀತಿ ಇದೆ. ಈ ಕಾರಣದಿಂದ ಅವರು ನನ್ನನ್ನು ಭೇಟಿಯಾಗಲು ನಮ್ಮ ಮನೆಗೆ ಬರುತ್ತಾರೆ. ಈ ಬಗ್ಗೆ ಬೇರ ಅರ್ಥ ಕಲ್ಪಿಸಿಕೊಳ್ಳುವ ಅವಶ್ಯಕತೆ ಇಲ್ಲ. ಇದೆಲ್ಲಾ ಮಾಧ್ಯಮದವರ ಸೃಷ್ಠಿ" ಎಂದರು.
ರಮೇಶ ಜಾರಕಿಹೊಳಿ ಅವರು ಸಿಎಂ ಆಗುತ್ತಾರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಈ ವಿಚಾರವಾಗಿ ಬೆಂಕಿ ಹಚ್ಚಬೇಡಿ" ಎಂದು ಹೇಳಿದರು.