ಚಂದ್ರಾಪುರ, ನ. 30 (DaijiworldNews/MB) : ಖ್ಯಾತ ಸಮಾಜ ಸೇವಕ ಬಾಬಾ ಅಮ್ಟೆ ಅವರ ಮೊಮ್ಮಗಳು, ಆನಂದ್ವನ್ನಲ್ಲಿರುವ ಮಹಾರೋಗಿ ಸೇವಾ ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಡಾ.ಶೀತಲ್ ವಿಕಾಸ್ ಅಮ್ಟೆ ಕಾರಜಿಗಿ ಸೋಮವಾರ ಚಂದ್ರಾಪುರದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇತ್ತೀಚೆಗೆ ಡಾ.ಶೀತಲ್ ಅವರು ಇತ್ತೀಚೆಗೆ ಮಹಾರೋಗಿ ಸೇವಾ ಸಮಿತಿಯ ಅಕ್ರಮಗಳ ಕುರಿತಾಗಿ ಕೆಲವು ಆರೋಪಗಳನ್ನು ಹೊರಿಸಿದ್ದು ಟ್ರಸ್ಟ್ ಮ್ಯಾನೇಜ್ಮೆಂಟ್ ಮತ್ತು ಅವರ ಕುಟುಂಬವನ್ನು ದೂಷಿಸಿದ್ದರು. ನವೆಂಬರ್ 24 ರಂದು ಈ ಬಗ್ಗೆ ಅವರು ಪತ್ರ ಬಿಡುಗಡೆ ಮಾಡಿದ್ದು ಅದರಲ್ಲಿ ಡಾ.ವಿಕಾಸ್ ಅಮ್ಟೆ, ಅವರ ಪತ್ನಿ ಡಾ.ಭಾರತಿ, ಡಾ.ಪ್ರಕಾಶ್ ಅಮ್ಟೆ ಮತ್ತು ಅವರ ಪತ್ನಿ ಡಾ.ಮಂಡಕಿನಿ ಅಮ್ಟೆ ಅವರ ಸಹಿ ಇತ್ತು.
ಹಾಗೆಯೇ ಆ ಆರೋಪದ ಬಗ್ಗೆ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದರು ಆದರೆ ಕೆಲವೇ ಗಂಟೆಗಳಲ್ಲಿ ಅದನ್ನು ಅಳಿಸಲಾಗಿತ್ತು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಡಾ.ಶೀತಲ್ ವಿಕಾಸ್ ಅಮ್ಟೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಅವರು ಕೆಲವು ವಿಷಭರಿತ ಚುಚ್ಚುಮದ್ದನ್ನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಶೀತಲ್ ಅವರು ಈ ಹಿಂದೆ ಮಾಡಿದ್ದ ಆರೋಪವನ್ನು ಅಲ್ಲಗಳೆದಿದ್ದ ಸಮಿತಿಯು ನವೆಂಬರ್ 22 ರಂದು ಮಾಧ್ಯಮ ಸಂಸ್ಥೆಗಳಿಗೆ ಹೇಳಿಕೆ ನೀಡಿದ್ದರು.