ಬೆಂಗಳೂರು, ನ. 30 (DaijiworldNews/MB) : ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಅವರು ಸೋಮವಾರ ಆಸ್ಪತ್ರೆಗೆ ಬಿಡುಗಡೆಯಾಗಿ ಮನೆಗೆ ವಾಪಾಸ್ ತೆರಳಿದ್ದಾರೆ. ಈ ಸಂದರ್ಭ ''ಒತ್ತಡ ಸಹಜ, ಅಷ್ಟಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ನಾನಲ್ಲ'' ಎಂದು ಅವರು ಹೇಳಿದ್ದಾರೆ.
ಶುಕ್ರವಾರ ಸಂಜೆ ಸಂತೋಷ್ ಅವರು ಡಾಲರ್ಸ್ ಕಾಲೊಮಿಯ ನಿವಾಸದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ತಕ್ಷಣವೇ ಅವರ ಕುಟುಂಬದವರನ್ನು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರು ನಿದ್ರೆ ಮಾತ್ರೆಗಳನ್ನು ತೆಗೆದುಕೊಂಡಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಆಸ್ಪತ್ರೆಯಿಂದ ವಾಪಾಸ್ ಮನೆಗೆ ಹೋಗುವ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಸಂತೋಷ್, ''ನಾನು ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ. ಮೂರು ದಿನದ ಹಿಂದೆ ಒಂದು ವಿವಾಹಕ್ಕೆ ಹೋಗಿದ್ದು ಅಲ್ಲಿಯ ಆಹಾರದಿಂದ ಆರೋಗ್ಯ ಸಮಸ್ಯೆ ಉಂಟಾದುದ್ದಕ್ಕೆ ಮಾತ್ರೆ ಸೇವಿಸಿದ್ದೆ. ನಾನು ಆ ಆರೋಗ್ಯ ಸಮಸ್ಯೆಗೆ ತೆಗೆದುಕೊಳ್ಳುವ ಮಾತ್ರೆ ಬದಲಾಗಿ ಬೇರೆಯೇ ಮಾತ್ರೆ ತೆಗೆದುಕೊಂಡಿದ್ದೆ. ಹಾಗಾಗಿ ಆರೋಗ್ಯದಲ್ಲಿ ಏರುಪೇರಾಯಿತು. ನನಗೆ ನಿದ್ರೆಯು ಬರುತ್ತಿರಲಿಲ್ಲ ಹಾಗಾಗಿ ನಿದ್ರೆ ಮಾತ್ರೆ ಸೇವಿಸುವ ಅಭ್ಯಾಸವಿದೆ. ರಾಜಕೀಯದಲ್ಲಿ ಒತ್ತಡವಿರುವುದು ಸಹಜ. ಅಷ್ಟಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ನಾನಲ್ಲ'' ಎಂದು ಹೇಳಿದ್ದಾರೆ.