ಮೈಸೂರು,ನ. 30 (DaijiworldNews/HR): ಕರ್ನಾಟಕದಲ್ಲಿ ಮಾತ್ರ ನಾಯಕತ್ವ ಬದಲಾವಣೆಯ ಕುರಿತು ಊಹಪೋಹಗಳು ಕೇಳುತ್ತಿದೆ, ಆದರೆ ದೆಹಲಿ ನಾಯಕರ ಮುಂದೆ ನಾಯಕತ್ವ ಬದಲಾವಣೆ ವಿಚಾರವೇ ಇಲ್ಲ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯಾವುದೇ ತಪ್ಪು ಮಾಡದೆ ಅವರನ್ನು ಬದಲಾಯಿಸುವುದು ಸರಿಯಲ್ಲ. ಈ ಬಗ್ಗೆ ಕೇಂದ್ರದ ನಾಯಕರನ್ನು ನಾನು ಭೇಟಿ ಮಾಡಿದ್ದೇನೆ. ಅವರು ಈ ವಿಚಾರವನ್ನು ನಿರಾಕರಿಸಿದ್ದಾರೆ" ಎಂದರು.
ಇನ್ನು ಒಕ್ಕಲಿಗರ ನಿಗಮ ಪ್ರಾಧಿಕಾರ ರಚನೆ ಕುರಿತು ಮಾತನಾಡಿದ ಅವರು, " ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ಮಾಡಿದ್ದೇನೆ. ಯಡಿಯೂರಪ್ಪ ಅವಧಿಯಲ್ಲೇ ಒಕ್ಕಲಿಗರ ಪ್ರಾಧಿಕಾರ ಆಗಲಿದೆ. ಈ ಸಂಬಂಧ ಸಮಾಜದ ಮುಖಂಡರು, ಸ್ವಾಮೀಜಿಗಳು, ಸಂಘ ಸಂಸ್ಥೆಯವರು ನನ್ನ ಜತೆ ಮಾತನಾಡಿದ್ದಾರೆ" ಎಂದು ಹೇಳಿದ್ದಾರೆ.