ಚೆನ್ನೈ, ನ. 30 (DaijiworldNews/MB) : ''ಚುನಾವಣಾ ರಾಜಕೀಯ ಪ್ರವೇಶಿಸುವ ಬಗ್ಗೆ ಶೀಘ್ರವೇ ನಿರ್ಧರಿಸುತ್ತೇನೆ'' ಎಂದು ದಕ್ಷಿಣ ಭಾರತದ ಸೂಪರ್ಸ್ಟಾರ್ ರಜನೀಕಾಂತ್ ಹೇಳಿದ್ದಾರೆ.
ಸೋಮವಾರ ರಜನೀಕಾಂತ್ ಅವರ ಮಾಲಕತ್ವದ ಚೆನ್ನೈನಲ್ಲಿರುವ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ರಜನಿ ಮಕ್ಕಳ್ ಮಂದರಮ್ನ ಜಿಲ್ಲಾ ಕಾರ್ಯದರ್ಶಿಗಳ ಸಭೆ ನಡೆಸಿದ್ದು ಬಳಿಕ ಈ ಹೇಳಿಕೆ ನೀಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಬಗ್ಗೆ ಶೀಘ್ರ ನಿರ್ಧರಿಸುತ್ತೇನೆ. ರಾಜ್ಯ ಪದಾಧಿಕಾರಿಗಳು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ನನ್ನ ನಿರ್ಧಾರಕ್ಕೆ ಸಮ್ಮತಿ ಸೂಚಿಸುವುದಾಗಿ ತಿಳಿಸಿದ್ದಾರೆ. ಆದಷ್ಟು ಶೀಘ್ರದಲ್ಲೇ ನಿರ್ಧಾರ ಪ್ರಕಟಿಸುತ್ತೇನೆ'' ಎಂದು ಹೇಳಿದ್ದಾರೆ.
ಚುನಾವಣಾ ರಾಜಕೀಯ ಪ್ರವೇಶ ವಿಳಂಬವಾಗಿದೆ ಎಂದು ಕಳೆದ ತಿಂಗಳು ರಜನಿ ಹೇಳಿದ್ದು, ಚುನಾವಣಾ ರಾಜಕೀಯ ಪ್ರವೇಶಿಸುವ ಬಗ್ಗೆ ಸುಳಿವು ನೀಡಿದ್ದರು.
ರಜನೀಕಾಂತ್ ಅವರಿಗೆ ರಾಜಕೀಯಕ್ಕೆ ಪ್ರವೇಶಿಸದಂತೆ ವೈದ್ಯರು ಸಲಹೆ ನೀಡುತ್ತಿರುವ ಹಿನ್ನೆಲೆಯಲ್ಲಿ ರಜನೀಕಾಂತ್ ಹೇಳಿಕೆ ಮಹತ್ವ ಪಡೆದಿದೆ.