ವಿಜಯಪುರ, ನ.30 (DaijiworldNews/PY): "ಸಚಿವ ಸಂಪುಟ ವಿಸ್ತರಣೆಗಾಗಿ ಹೈಕಮಾಂಡ್ನ ನಿರ್ದೇಶನಕ್ಕಾಗಿ ನಿರೀಕ್ಷಿಸುತ್ತಿದ್ದೇವೆ. ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆಯಾಗಲಿದೆ" ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿಎಂ ಬದಲಾವಣೆ ಎನ್ನುವುದು ವದಂತಿ, ಮಾಧ್ಯಮಗಳ ಸೃಷ್ಠಿಯಾಗಿದೆ. ಬಿಎಸ್ವೈ ಅವರು ತಮ್ಮ ಅಧಿಕಾರವಧಿಯನ್ನು ಪೂರ್ಣಗೊಳಿಸುತ್ತಾರೆ" ಎಂದರು.
"ಬಿಜೆಪಿ ಪಕ್ಷಕ್ಕೆ ಬೇರೆ ಪಕ್ಷಗಳನ್ನು ತೊರೆದುಬಂದ ಶಾಸಕರಿಗೆ ಸಚಿವ ಸ್ಥಾನ ಸಿಗಬೇಕು. ಅವರಿಗೆ ಸಚಿವ ಸ್ಥಾನ ಖಂಡಿತವಾಗಿಯೂ ಸಿಗಲಿದೆ" ಎಂದು ತಿಳಿಸಿದರು.
ಲಿಂಗಾಯತರನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರ್ಪಡಿಸುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಕೇಂದ್ರದ ಒಬಿಸಿ ಪಟ್ಟಿಗೆ ಲಿಂಗಾಯತರನ್ನು ಸೇರ್ಪಡೆಗೊಳಿಸುವ ಮುನ್ನ ಕಾನೂನು ಹಾಗೂ ಸಂವಿಧಾನಾತ್ಮಕ ಚೌಕಟ್ಟಿನಲ್ಲಿ ಚರ್ಚೆ ನಡೆಸಿ, ಅಡ್ವಕೇಟ್ ಜನರಲ್ ಅಭಿಪ್ರಾಯ ಪಡೆದುಕೊಂಡ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದೇವೆ" ಎಂದರು.
ಶಾಸಕ ದೇವಾನಂದ ಚವ್ಹಾಣ ಅವರು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ಕಾರಜೋಳ ಅವರು ನಾಗಠಾಣ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ತಡೆಯೊಡ್ಡಿದ್ದಾರೆ ಎಂದು ಹೇಳಿರುವ ದೇವಾನಂದ ಅವರ ಆರೋಪ ಸುಳ್ಳು. ಪ್ರತಿಯೋರ್ವ ಶಾಸಕರಿಗೂ ನಮ್ಮ ಸರ್ಕಾರದಲ್ಲಿ ರಕ್ಷಣೆ ಇದೆ. ಅವರು ಭ್ರಮೆಯಲ್ಲಿದ್ದಾರೆ. ಅಲ್ಲದೇ, ಜನರಿಂದ ಅವರು ದೂರವಾಗಿದ್ದಾರೆ" ಎಂದು ಹೇಳಿದರು.