ಲಕ್ನೋ, ನ. 30 (DaijiworldNews/MB) : ಮತಾಂತರ ನಿಷೇಧ ಕಾಯ್ದೆ ಬಗ್ಗೆ ಮರುಪರಿಶೀಲನೆ ನಡೆಸಿ ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಮನವಿ ಮಾಡಿದ್ದಾರೆ.
ಈ ನೂತನ ಕಾಯ್ದೆಯಡಿ ಬರೇಲಿ ಜಿಲ್ಲೆಯಲ್ಲಿ ಯುವತಿಯೊಬ್ಬರ ತಂದೆ ಮೊದಲ ದೂರು ದಾಖಲಿಸಿದ್ದಾರೆ. ನನ್ನ ಪುತ್ರಿಯನ್ನು ನನ್ನ ಗ್ರಾಮದ ಉವೇಶ್ ಅಹ್ಮದ್ ಆಸೆ ತೋರಿಸಿ ಮತಾಂತರಗೊಳಿಸಲು ಯತ್ನಿಸುತ್ತಿದ್ದಾನೆ ಎಂದು ಟೀಕಾರಾಮ್ ದೂರು ನೀಡಿದ್ದಾರೆ.
ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ಟ್ವೀಟ್ ಮಾಡಿರುವ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಮತಾಂತರ ನಿಷೇಧ ಕಾಯ್ದೆ ಬಗ್ಗೆ ಮರುಪರಿಶೀಲನೆ ನಡೆಸಿ ಎಂದು ಹೇಳಿದ್ದು ಈ ಕಾಯ್ದೆ "ಅನುಮಾನ ಮತ್ತು ಆತಂಕ"ಗಳಿಂದ ಕೂಡಿದೆ ಎಂದು ಹೇಳಿದೆ.
''ಲವ್ ಜಿಹಾದ್ ಎದುರು ಯುಪಿ ಸರ್ಕಾರವು ತಂದ ಮತಾಂತರದ ಸುಗ್ರೀವಾಜ್ಞೆಯು ಆತಂಕದಿಂದ ಕೂಡಿದೆ. ನಮ್ಮ ದೇಶದಲ್ಲಿ ವಂಚನೆ ಮತ್ತು ಒತ್ತಾಯಪೂರ್ವಕ ಮತಾಂತರಕ್ಕೆ ಯಾವುದೇ ಮಾನ್ಯತೆಯಿಲ್ಲ. ಈ ನಿಟ್ಟಿನಲ್ಲಿ ಈಗಾಗಲೇ ಅನೇಕ ಕಾನೂನುಗಳು ಜಾರಿಯಲ್ಲಿವೆ. ಹಾಗಾಗಿ ಈ ಮತಾಂತರ ನಿಷೇಧ ಕಾಯ್ದೆ ಬಗ್ಗೆ ಮರುಪರಿಶೀಲನೆ ನಡೆಸಬೇಕು ಎಂಬುದು ಬಿಎಸ್ಪಿಯ ಬೇಡಿಕೆಯಾಗಿದೆ'' ಎಂದು ಮಾಯಾವತಿ ಟ್ವೀಟಿಸಿದ್ದಾರೆ.
ಬಲವಂತದ ಅಥವಾ ಅಪ್ರಮಾಣಿಕ ಧಾರ್ಮಿಕ ಮತಾಂತರಗಳನ್ನು ನಿಷೇಧಿಸುವ ಸುಗ್ರೀವಾಜ್ಞೆಗೆ ಶನಿವಾರ ಉತ್ತರಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರು ಅಂಕಿತ ಹಾಕಿದ್ದಾರೆ. ಈ ಕಾಯ್ದೆಯಡಿ ಅಪರಾಧಿಗೆ ಹತ್ತು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.