ಕಾರವಾರ, ನ. 30 (DaijiworldNews/MB) : ''ಮಠಾಧೀಶರಿಗೆ ರಾಜಕೀಯ ಯಾಕೆ ಬೇಕು?'' ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ನಾವು ಸಮುದಾಯಗಳ ಅಭಿವೃದ್ದಿಗೆಂದು ರಾಜಕಾರಣಿಗಳಿದ್ದೇವೆ. ಸ್ವಾಮೀಜಿಗಳು ಅವರ ಮಠದಲ್ಲಿದ್ದುಕೊಂಡು ಸಮಾಜದ ಶಾಂತಿಯ ಬಗ್ಗೆ ಗಮನ ಹರಿಸಲಿ. ಅವರಿಗ್ಯಾಕೆ ಬೇಕು ರಾಜಕೀಯ? ಅಷ್ಟಕ್ಕೂ ರಾಜಕೀಯದಲ್ಲಿ ಭಾರೀ ಆಸಕ್ತಿ ಇದ್ದರೆ ನಮ್ಮ ಜೊತೆ ವಿಧಾನಸೌಧಕ್ಕೆ ಬರಲಿ'' ಎಂದು ಹೇಳಿದ್ದಾರೆ.
''ಸರ್ಕಾರವು ಜಾತಿಗೊಂದು ನಿಗಮ ರಚಿಸಲು ಮುಂದಾಗಿದ್ದೆ ತಪ್ಪು. ಅದಕ್ಕೆ ಸ್ವಾಮೀಜಿಗಳು ಮಧ್ಯಪ್ರವೇಶಿಸುವುದೂ ಕೂಡಾ ಸರಿಯಲ್ಲ'' ಎಂದು ಅವರು ಅಭಿಪ್ರಾಯಪಟ್ಟರು.
ಇನ್ನು ಆನ್ಲೈನ್ ತರಗತಿಗಳ ವಿಚಾರವಾಗಿ ಈ ಸಂದರ್ಭದಲ್ಲೇ ಮಾತನಾಡಿದ ಅವರು, ''ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಹೇಳಿಕೆಗಳು ವಿದ್ಯಾರ್ಥಿಗಳಿಗೆ ಗೊಂದಲ ಮೂಡಿಸುವಂತಿದೆ. ನನ್ನ ಅನುಭವದ ವಿಚಾರಗಳ ಬಗ್ಗೆ ಸರ್ಕಾರಕ್ಕೆ ತಿಳಿಸಿದ್ದೇನೆ. ಆದರೆ ಸರ್ಕಾರ ಅದಕ್ಕೆ ಕಿವಿಕೊಡಲಿಲ್ಲ. ನಾನು ಎರಡು ದಿನದಲ್ಲೇ ಎಲ್ಲಾ ಸಮಸ್ಯೆ ಬಗೆಹರಿಸುತ್ತೇನೆ'' ಎಂದು ಹೇಳಿದರು.
''ಶುಲ್ಕದಲ್ಲೇ ಹಲವು ಶಾಲೆಗಳು ನಡೆಯುತ್ತದೆ. ಅಷ್ಟಕ್ಕೂ ಕಾರಿನಲ್ಲೇ ಮಕ್ಕಳನ್ನು ಕರೆದುಕೊಂಡು ಬರುವವರಲ್ಲಿ ಶುಲ್ಕ ಪಡೆದುಕೊಂಡರೆ ತಪ್ಪೇನಿದೆ'' ಎಂದು ಪ್ರಶ್ನಿಸಿದರು.