ನವದೆಹಲಿ, ನ.30 (DaijiworldNews/PY): ಸಿಖ್ ಧರ್ಮದ ಸ್ಥಾಪಕ ಗುರು ನಾನಕ್ ಜಯಂತಿಯ ಪ್ರಯಕ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಹಲವು ಗಣ್ಯರು ಗುರು ನಾನಕ್ ಜಯಂತಿಯ ಶುಭಕೋರಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಅವರು ಟ್ವೀಟ್ ಮಾಡಿದ್ದು, "ಗುರು ನಾನಕ್ ಅವರು ಜನರಿಗೆ ಏಕತೆ, ಸಾಮರಸ್ಯ, ಭ್ರಾತೃತ್ವ ಹಾಗೂ ಸೇವೆಯ ಮಾರ್ಗವನ್ನು ತೋರಿಸಿದವರು. ಕಠಿಣ ಪರಿಶ್ರಮ, ಪ್ರಾಮಾಣಿಕತೆ ಹಾಗೂ ಸ್ವಾಭಿಮಾನದ ಆಧಾರದ ಮೇಲೆ ಜೀವನಶೈಲಿಯನ್ನು ಸಾಕಾರಗೊಳಿಸಲು ಆರ್ಥಿಕ ತತ್ವಶಾಸ್ತ್ರವನ್ನು ಬೋಧನೆ ಮಾಡಿದರು. ಅವರ ಜೀವನ ಹಾಗೂ ಅವರ ಬೋಧನೆಗಳು ಎಲ್ಲಾ ಮಾನವಕುಲಕ್ಕೆ ಸ್ಪೂರ್ತಿ" ಎಂದಿದ್ದಾರೆ.
ಇನ್ನೊಂದು ಟ್ವೀಟ್ನಲ್ಲಿ, "ಗುರು ನಾನಕ್ ಜಯಂತಿಯ ಈ ವೇಳೆ ದೇಶದ ನಾಗರಿಕರಿಗೆ, ವಿಶೇಷವಾಗಿ ಸಿಖ್ ಸಹೋದರ-ಸಹೋದರಿಯರಿಗೆ ಶುಭಾಶಯಗಳು. ಈ ಶುಭ ದಿನದಂದು ಗುರು ನಾನಕ್ರ ಬೋಧನೆಗಳನ್ನು ಅನುಸರಿಸಿಕೊಂಡು ಮುನ್ನಡೆಯೋಣ ಎಂದು ನಾವು ತೀರ್ಮಾನಿಸೋಣ" ಎಂದು ಹೇಳಿದ್ಧಾರೆ.
ಪ್ರಧಾನಿ ಮೋದಿ ಅವರು ಟ್ವೀಟ್ ಮೂಲಕ ಶುಭಕೋರಿದ್ದು, "ಗುರು ನಾನಕ್ ದೇವ್ ಜೀ ಅವರಿಗೆ ನನ್ನ ನಮಸ್ಕಾರಗಳು. ಅವರ ಚಿಂತನೆಗಳು ಸಮಾಜದ ಸೇವೆ ಮಾಡಲು ಹಾಗೂ ಭೂಮಿಯ ಸಂರಕ್ಷಣೆ ಮಾಡುವ ಸಲುವಾಗಿ ಕಾರ್ಯನಿರ್ವಹಿಸಲು ನಮಗೆ ಪ್ರೇರಣೆ ನೀಡಲಿ" ಎಂದಿದ್ದಾರೆ.
ಸಿಎಂ ಬಿಎಸ್ವೈ ಅವರೂ ಕೂಡಾ ಟ್ವೀಟ್ ಮಾಡಿದ್ದು, "ಎಲ್ಲರಿಗೂ ಗುರುನಾನಕ್ ಜಯಂತಿಯ ಭಕ್ತಿಪೂರ್ವಕ ಶುಭಾಶಯಗಳು. ಸೋದರತ್ವ, ಸಮಾಜಸೇವೆ ಮತ್ತು ಸದ್ಗುಣಗಳ ದಾರಿಯಲ್ಲಿ ದೇವರನ್ನು ಸೇರುವ ದಾರಿತೋರಿದ ಗುರು ನಾನಕ್ ಅವರ ಬೋಧನೆಗಳು ಮನುಕುಲಕ್ಕೆ ಜ್ಞಾನದ ಬೆಳಕನ್ನು ನೀಡುತ್ತಿವೆ" ಎಂದು ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಟ್ವೀಟ್ ಮಾಡಿದ್ದು, "ಎಲ್ಲರಿಗೂ ಗುರು ನಾನಕ್ ಜಯಂತಿಯ ಶುಭಾಶಯಗಳು. ನಿಮಗೆಲ್ಲರಿಗೂ ಆರೋಗ್ಯ, ಸಂತೋಷ ಹಾಗೂ ಸಮೃದ್ಧಿ ದೊರಕಲಿ. ಎಲ್ಲರೂ ಕೂಡಾ ಗುರು ನಾನಕ್ರ ಬೋಧನೆಗಳನ್ನು ಅನುಸರಿಸೋಣ" ಎಂದಿದ್ದಾರೆ.