ಭೋಪಾಲ್, ನ. 30 (DaijiworldNews/MB) : ಸಿಗರೇಟ್ ಹಚ್ಚಲು ಬೆಂಕಿಪೊಟ್ಟಣ ನೀಡಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ಥಳಿಸಿ ಹತ್ಯೆ ಮಾಡಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಗುಣ ಜಿಲ್ಲೆಯ ಕರೋಡ್ ಎಂಬ ಗ್ರಾಮದಲ್ಲಿ ನಡೆದಿದೆ.
ಹತ್ಯೆಗೀಡಾದ ದಲಿತ ವ್ಯಕ್ತಿ 50 ವರ್ಷ ವಯಸ್ಸಿನ ಲಾಲ್ಜಿರಾಂ ಅಹಿರ್ವಾರ್ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಆರೋಪಿಗಳು ಸಿಗರೇಟ್ ಹಚ್ಚಲು ಲಾಲ್ಜಿರಾಂ ಅವರಲ್ಲಿ ಬೆಂಕಿಪೊಟ್ಟಣ ಕೇಳಿದ್ದಾರೆ. ಆದರೆ ಅವರು ಬೆಂಕಿಪೊಟ್ಟಣ ನೀಡಲು ನಿರಾಕರಿಸಿದ್ದಾರೆ. ಇದೇ ಕಾರಣಕ್ಕೆ ಆರೋಪಿಗಳು ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಹೊಲದಲ್ಲಿ ಲಾಲ್ಜಿರಾಂ ಅಹಿರ್ವಾರ್ ಅವರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಯಶ್ ಯಾದವ್ ಮತ್ತು ಅಂಕೇಶ್ ಯಾದವ್ ಎಂಬವರು ಸಿಗರೇಟ್ ಹಚ್ಚಲು ಬೆಂಕಿಪೊಟ್ಟಣ ಕೇಳಿದರು ಆ ವೇಳೆ ಲಾಲ್ಜಿರಾಂ ಬೆಂಕಿಪೊಟ್ಟಣ ನೀಡಲು ನಿರಾಕರಿಸಿದ್ದು ಈ ವಿಚಾರದಲ್ಲಿ ವಾಗ್ವಾದ ನಡೆದಿದೆ. ತೀವ್ರ ಆಕ್ರೋಶಗೊಂಡ ಆರೋಪಿಗಳು ಲಾಲ್ ಜಿ ಅವರಿಗೆ ದೊಣ್ಣೆಯಿಂದ ಹೊಡೆದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಲಾಲ್ ಜಿರಾಂ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈಗಾಗಲೇ ಈ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನು ಸಂತ್ರಸ್ತ ಕುಟುಂಬಕ್ಕೆ ಸರ್ಕಾರ 8.25 ಲಕ್ಷ ಹಣಕಾಸು ನೆರವು ಘೋಷಣೆ ಮಾಡಿದೆ.