ಗದಗ, ನ.30 (DaijiworldNews/PY): "ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ 16 ಸಾವಿರ ಸಿಬ್ಬಂದಿಗಳ ನೇಮಕಾತಿಗೆ ಆರ್ಥಿಕ ಇಲಾಖೆಯಿಂದ ಅನುಮೋದನೆ ದೊರೆತಿದ್ದು, ಶೀಘ್ರದಲ್ಲೇ ನೇಮಕವಾಗಲಿದೆ" ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "16 ಸಾವಿರ ಸಿಬ್ಬಂದಿಗಳ ನೇಮಕಾತಿಗೆ ಆರ್ಥಿಕ ಇಲಾಖೆಯಿಂದ ಅನುಮೋದನೆ ದೊರೆತಿದೆ. ಇದಕ್ಕೆ ಶೀಘ್ರದಲ್ಲೇ ನೇಮಕವಾಗಲಿದೆ. ಉಳಿದ ಹುದ್ದೆಗಳಿಗೆ ಮುಂಬರುವ ಎರಡು ವರ್ಷಗಳಲ್ಲಿ ಹಂತ ಹಂತವಾಗಿ ನೇಮಕ ಮಾಡಲಾಗುವುದು" ಎಂದಿದ್ದಾರೆ.
ಸಚಿವ ಸಂಪುಟ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿಯವರು ತೆಗೆದುಕೊಳ್ಳುವ ತಿರ್ಮಾನಕ್ಕೆ ನಾವೆಲ್ಲರೂ ಬದ್ಧ. ಪಕ್ಷದಲ್ಲಿ ಯಾವುದೇ ರೀತಿಯಾದ ಭಿನ್ನಾಭಿಪ್ರಾಯಗಳಿಲ್ಲ" ಎಂದು ತಿಳಿಸಿದ್ದಾರೆ.
"ಬಿಜೆಪಿ ಅಧಿಕಾರಕ್ಕೆ ಬರಬೇಕು ಎನ್ನುವ ನಿಟ್ಟಿನಲ್ಲಿ ಇತರ ಪಕ್ಷಗಳ 17 ಶಾಸಕರು ರಾಜೀನಾಮೆ ನೀಡಿ ಪಕ್ಷ ಸೇರಿದ್ದ ಕಾರಣದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಎಂದಿಗೂ ಕೂಡಾ ನಾವು ಅವರನ್ನು ಮರೆಯುವುದಿಲ್ಲ. ಅವರಿಗೆ ಕೊಟ್ಟ ಮಾತನ್ನು ಸಿಎಂ ಬಿಎಸ್ವೈ ಅವರು ಈಡೇರಿಸುತ್ತಾರೆ" ಎಂದಿದ್ದಾರೆ.
ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಅತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಂಬಂಧಿಸಿದಂತೆ ಮಾತನಾಡಿದ ಅವರು, "ಸಂತೋಷ್ ಗುಣಮುಖರಾಗುತ್ತಿದ್ದಾರೆ. ಊಹಾಪೋಹಗಳಿಗೆಲ್ಲ ನಾನು ಉತ್ತರಿಸುವುದಿಲ್ಲ. ಸತ್ಯ ಏನೆಂದು ಅವರಿಂದಲೇ ತಿಳಿಯುತ್ತದೆ" ಎಂದು ಹೇಳಿದ್ದಾರೆ.