ರಾಜಸ್ಥಾನ, ನ. 30 (DaijiworldNews/HR): ರಾಜಸ್ಥಾನದ ರಾಜಸಮಂದ್ನ ಬಿಜೆಪಿ ಶಾಸಕಿ ಕಿರಣ್ ಮಹೇಶ್ವರಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಕಿರಣ್ ಮಹೇಶ್ವರಿ ಅವರಿಗೆ ಕಳೆದ ತಿಂಗಳು ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಬಳಿಕ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು ಗುರುಗ್ರಾಮ್ನ ಮೇದಾಂತ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ರಾತ್ರಿ ನಿಧನರಾಗಿದ್ದಾರೆ.
ಮಹೇಶ್ವರಿ ಅವರು ರಾಜಸ್ಥಾನದ ಉದಯಪುರ ಕ್ಷೇತ್ರದಿಂದ 2006 ರಿಂದ 2009 ರವರೆಗೆ 14ನೇ ಲೋಕಸಭೆ ಸದಸ್ಯರಾಗಿದ್ದರು. ಕೋಟಾ ಉತ್ತರ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಗೆ ಉಸ್ತುವಾರಿಯಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.