ಹೈದರಾಬಾದ್, ನ. 30 (DaijiworldNews/HR) : ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಪ್ರತಿಭಟನೆಗಳನ್ನು ನಡೆಸುತ್ತಿದ್ದು, ಈ ಪ್ರತಿಭಟನೆಯಲ್ಲಿ ರಾಜಕೀಯವಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಜಾರಿಗೆ ತಂದಿರುವ ಹೊಸ ಕೃಷಿ ಕಾನೂನುಗಳು ರೈತರರಿಗೆ ಉಪಯೋಗವಾಗಲಿದ್ದು, ಈ ಕಾಯ್ದೆಯಿಂದ ರೈತರು ಸ್ವತಂತ್ರರಾಗಲಿದ್ದಾರೆ. ಈ ಕಾನೂನುಗಳನ್ನು ರಾಜಕೀಯವಾಗಿ ವಿರೋಧಿಸುವವರು ವಿರೋಧಿಸಲಿ ಆದರೆ ರೈತರ ಪ್ರತಿಭಟನೆಯು ರಾಜಕೀಯದಿಂದ ಕೂಡಿದೆ ಎಂದು ನಾನು ಹೇಳಿಲ್ಲ, ಮುಂದೆನೂ ಹೇಳುವುದಿಲ್ಲ ಎಂದರು.
ಇನ್ನು ಕೇಂದ್ರ ಸರ್ಕಾರವು ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳಲು ಲಿಖಿತ ಪತ್ರದಲ್ಲಿ ಸೂಚಿಸುವಂತೆ ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿಯವರನ್ನು ಆಗ್ರಹಿಸಿದ ಶಾ, ನಾನು ಕ್ರಮವೊಂದನ್ನು ಕೈಗೊಂಡರೆ ಉವೈಸಿ ಮತ್ತು ಇತರ ಪಕ್ಷಗಳು ಸಂಸತ್ತಿನಲ್ಲಿ ಕೋಲಾಹಲವನ್ನು ಎಬ್ಬಿಸುತ್ತಾರೆ. ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶಿಗಳನ್ನು ಉಚ್ಚಾಟಿಸುವಂತೆ ಉವೈಸಿ ನನಗೆ ಲಿಖಿತ ಪತ್ರವನ್ನು ನೀಡಲಿ, ಆಗ ನಾನು ಕ್ರಮವನ್ನು ಆರಂಭಿಸುತ್ತೇನೆ ಎಂದು ಹೇಳಿದ್ದಾರೆ.