ನವದೆಹಲಿ, ನ. 30 (DaijiworldNews/MB) : ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರೋಧಿಸಿ ಕಳೆದ ನಾಲ್ಕು ದಿನದಿಂದ ದೆಹಲಿಯ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಗೆ ಸರ್ಕಾರ ನಿಗದಿ ಪಡಿಸಿರುವ ದೆಹಲಿಯ ಬುರಾಡಿ ಮೈದಾನಕ್ಕೆ ತೆರಳಿದ ಬಳಿಕ ಮಾತುಕತೆ ನಡೆಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರವಿವಾರ ಹೇಳಿದ್ದಾರೆ. ಈ ಪ್ರಸ್ತಾಪವನ್ನು ರೈತರು ತಿರಸ್ಕರಿಸಿದ್ದು ದೆಹಲಿಯ ಐದು ಪ್ರವೇಶ ಮಾರ್ಗಗಳನ್ನೂ ಬಂದ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ರೈತರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಆದರೆ ಮೊದಲು ರೈತರು ಸರ್ಕಾರ ನಿಗದಿಪಡಿಸಿರುವ ಮೈದಾನಕ್ಕೆ ತೆರಳಬೇಕು. ಬಳಿಕ ಶಾ ಡಿಸೆಂಬರ್ ಮೂರರಂದು ಮಾತನಾಡಲಿದ್ದಾರೆ ಸರ್ಕಾರವು ರವಿವಾರ ತಿಳಿಸಿತ್ತು. ಈ ಷರತ್ತನ್ನು ರೈತರು ತಿರಸ್ಕರಿಸಿದ್ದು ನಾವು ಯಾವುದೇ ಷರತ್ತುಬದ್ದ ಮಾತುಕತೆ ನಡೆಸಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಪಂಜಾಬ್ನ ಭಾರತೀಯ ಕಿಸಾನ್ ಯೂನಿಯನ್ನ ಅಧ್ಯಕ್ಷ ಸುರ್ಜೀತ್ ಎಸ್ ಫುಲ್, ''ನಾವು ಗೃಹ ಸಚಿವ ಅಮಿತ್ ಶಾ ಅವರು ವಿಧಿಸಿರುವ ಷರತ್ತನ್ನು ನಾವು ಒಪ್ಪಲ್ಲ. ಸರ್ಕಾರದ ಪ್ರಸ್ತಾಪವನ್ನು ನಾವು ತಿರಸ್ಕರಿಸುತ್ತೇವೆ. ಯಾವುದೇ ಷರತ್ತುಬದ್ದ ಮಾತುಕತೆಗೆ ನಾವು ಸಿದ್ದರಿಲ್ಲ. ನಮ್ಮ ಹೋರಾಟ ಕೊನೆಯಾಗದು'' ಎಂದು ಹೇಳಿದ್ದಾರೆ.
''ಹಾಗೆಯೇ ದೆಹಲಿ ಪ್ರವೇಶಿಸುವ ಎಲ್ಲಾ ಐದು ಮಾರ್ಗಗಳನ್ನು ನಾವು ಬಂದ್ ಮಾಡುತ್ತೇವೆ'' ಎಂದಿದ್ದಾರೆ.
''ಅಷ್ಟೇ ಅಲ್ಲದೇ ಮಾತುಕತೆ ನಡೆಸಬೇಕಾದರೆ ರೈತರಿಗೆ ಹಾಕಿರುವ ಷರತ್ತು ರೈತರಿಗೆ ಮಾಡಿದ ಅವಮಾನ. ನಾವು ಆ ಮೈದಾನಕ್ಕೆ ಹೋಗುವುದಿಲ್ಲ. ಅದು ಮೈದಾನವಲ್ಲ ತೆರೆದ ಜೈಲು'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಕೆಲವು ರೈತರು ಬುರಾರಿಯ ನಿರಂಕರಿ ಸಮಗಂ ಮೈದಾನಕ್ಕೆ ಶನಿವಾರವೇ ತಲುಪಿದ್ದು ಅಲ್ಲಿಯೇ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.